ಕಟ್ಟಿಗೆಗೆ ಕಟ್ಟಿಕೊಂಡು ಶವ ಸಾಗಿಸಿದ ಗ್ರಾಮಸ್ಥರು: ಚಿಕ್ಕಮಗಳೂರು ಜಿಲ್ಲೆಯಲ್ಲೊಂದು ಮನಕಲಕುವ ಘಟನೆ
ಚಿಕ್ಕಮಗಳೂರು: ಸರಿಯಾದ ರಸ್ತೆ ಸಂಪರ್ಕ ಇಲ್ಲದ ಕಾರಣ ಯುವಕನೊಬ್ಬನ ಮೃತದೇಹವನ್ನು ಬಡಿಗೆಗೆ ಕಟ್ಟಿಕೊಂಡು ಗ್ರಾಮಕ್ಕೆ ಹೊತ್ತು ತಂದ ಘಟನೆ ನಡೆದಿದೆ.
ಕಳಸ ತಾಲೂಕಿನ ಎಸ್.ಕೆ. ಮೇಗಲ್ ಗ್ರಾಮದ ಯುವಕ ಅವಿನಾಶ್ ಬೆನ್ನು ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದರು. ಶುಕ್ರವಾರ ಚಿಕಿತ್ಸೆ ಫಲಿಸದೆ ಯುವಕ ಮೃತಪಟ್ಟಿದ್ದರು. ಅಂತ್ಯಸಂಸ್ಕಾರ ನಡೆಸಲು ಮೃತದೇಹವನ್ನು ಮನೆಗೆ ತರಲು ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು ಬಡಿಗೆಗೆ ಕಟ್ಟಿಕೊಂಡು ಹೊತ್ತು ತಂದರು.
ಆಂಬ್ಯುಲೆನ್ಸ್ ಬಂದರೂ ರಸ್ತೆ ಇಲ್ಲದ ಕಾರಣ ಊರಿನಿಂದ 3 ಕಿ.ಮೀ. ದೂರದಲ್ಲಿ ನಿಲ್ಲಬೇಕಾಗಿದೆ. ಗಂಭೀರ ಆರೋಗ್ಯ ಸಮಸ್ಯೆ ಉಂಟಾದಾಗ ಆಸ್ಪತ್ರೆಗೆ ಹೋಗಲು ನರಕಯಾತನೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿಗೆ ಸಮರ್ಪಕ ರಸ್ತೆ ಮಾಡಿಸಿಕೊಡಿ ಎಂದು ಮನವಿ ಮಾಡಿದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಗ್ಗೆ ಸ್ಪಂದಿಸುತ್ತಿಲ್ಲ. ಇನ್ನಾದರೂ ರಸ್ತೆ ವ್ಯವಸ್ಥೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.