ಶ್ರೀರಂಗಪಟ್ಟಣ ದೇಗುಲದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು: ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು

Karnataka-waqf-board
Share It

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಶ್ರೀ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಪಹಣಿಯಲ್ಲಿಯೂ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ತಿಳಿದುಬಂದಿದ್ದು, ಇದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ.

ದೇಗುಲದ ಆಸ್ತಿ ದಾಖಲೆ ನೋಡಿದ ಗ್ರಾಮಸ್ಥರಿಗೆ ಶಾಕ್ ಆಗಿದ್ದು, ಇದರಿಂದಾಗಿ ಅವರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ಕಳೆದ ಹಲವು ವರ್ಷಗಳಿಂದ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಹೆಸರು ಪಹಣಿಯಲ್ಲಿ ಬರುತ್ತಿತ್ತು.

ಹಲವು ದಶಕಗಳ ಹಿಂದೆಯೇ ಗ್ರಾಮಸ್ಥರ ಸಹಾಯದಿಂದ ದೇಗುಲ ನಿರ್ಮಾಣವಾಗಿದೆ. ಭೂ ದಾಖಲೆ ಕೂಡ ಚಿಕ್ಕಮ್ಮ ಚಿಕ್ಕದೇವಿ ಹೆಸರಲ್ಲಿಯೇ ಇತ್ತು ಎನ್ನುತ್ತಾರೆ ಗ್ರಾಮಸ್ಥರು. ಆದರೆ, ಒಂದು ವರ್ಷದ ಹಿಂದೆ ದಿಢೀರಾಗಿ ‘ವಕ್ಫ್ ಆಸ್ತಿ’ ಎಂದು ನಮೂದಿಸಲಾಗಿದೆ. ಸರ್ವೆ ನಂಬರ್ 74 ರಲ್ಲಿರುವ ದೇಗುಲ ಹಾಗೂ ದೇಗುಲಕ್ಕೆ ಸೇರಿ 6 ಗುಂಟೆ ಜಾಗ ವಕ್ಫ್ ಆಸ್ತಿ ಎಂದು ನಮೂದಾಗಿದೆ.

ವಕ್ಫ್ ಒಡೆತನದಲ್ಲಿ ದೇಗುಲವಿದೆ ಎಂಬ ಆರ್‌ಟಿಸಿ ಹಾಗೂ‌ ಭೂ ದಾಖಲೆ ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಉಪವಿಭಾಗಧಿಕಾರಿ ಸೂಚನೆ ಮೇರೆಗೆ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ಆರೋಪಿಸಿರುವ ಅವರು, ನಮ್ಮೂರಲ್ಲಿ ಮುಸ್ಲಿಂ ಪ್ರಾಬಲ್ಯವೂ ಇಲ್ಲ. ದೇವಾಲಯದ ಹೆಸರಲ್ಲಿದ್ದ ಆಸ್ತಿಯನ್ನು ವಕ್ಫ್​​ಗೆ ಸೇರಿಸುವಂತೆ ಗ್ರಾಮಸ್ಥರು ಪತ್ರ ಬರೆದಿಲ್ಲ. ಆದರೆ ಅದ್ಹೇಗೆ ಗ್ರಾಮಸ್ಥರ ಗಮನಕ್ಕೂ ಬಾರದೇ ವಕ್ಫ್ ಆಸ್ತಿ ಎಂದು ದಾಖಲಾಗಿದೆ? ಇದರ ಹಿಂದೆ ಹಲವು ಅನುಮಾನ ಮೂಡುತ್ತಿದೆ ಎಂದಿದ್ದಾರೆ.

ದೇಗುಲವಲ್ಲದೇ ರೈತರ ಜಮೀನ ಮೇಲೂ ದಾಖಲೆ ತಿದ್ದಿರುವ ಶಂಕೆ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು, ಕೂಡಲೇ ದೇಗುಲ ಹಾಗೂ ದೇಗುಲದ ಜಾಗ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿರುವುದನ್ನು ತಿದ್ದುಪಡಿ ಮಾಡಬೇಕು, ದೇಗುಲದ ಆಸ್ತಿಯೆಂದು ನಮೂದಾಗಬೇಕು ಎಂದು ಆಗ್ರಹಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು‌ ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ, ಜಿಲ್ಲಾಡಳಿತದ ವಿರುದ್ಧ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ.


Share It

You cannot copy content of this page