371 ಅಡಿ ಆಯ್ಕೆಯಾದ BMTC ಕಂಡಕ್ಟರ್ ಅಭ್ಯರ್ಥಿಗಳಿಗೆ ಆದೇಶ ಪತ್ರ ವಿತರಣೆ
ಬೆಂಗಳೂರು: ಬಿಎಂಟಿಸಿಯಲ್ಲಿ ನಿರ್ವಾಹಕ ಹುದ್ದೆಯ (371-ಜೆ) ವೃಂದದಲ್ಲಿ 212 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಇಂದು ವಿತರಿಸಿದರು.
ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2500 ನಿರ್ವಾಹಕ ಹುದ್ದೆಯ ನೇಮಕಾತಿ ಸಂಬಂಧ 371-ಜೆ (ಕಲ್ಯಾಣ ಕರ್ನಾಟಕ) ಮೀಸಲಾತಿಯಡಿ 212 ಅಭ್ಯರ್ಥಿಗಳನ್ನು ಆಯ್ಕೆಗೊಳಿಸಲಾಗಿದೆ.
ಜಾಹೀರಾತುಪಡಿಸಿದ ಹುದ್ದೆಗಳ ಸಂಖ್ಯೆ 214 ಅದಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆ 5410, ಶೇ. 30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಅಭ್ಯರ್ಥಿಗಳ ಸಂಖ್ಯೆ 1334, ಅದರಲ್ಲಿ ಮೂಲ ದಾಖಲೆ/ದೇಹದಾರ್ಢ್ಯತೆ ಪರಿಶೀಲನೆ ನಡೆಸಿ, ಅಂತಿಮವಾಗಿ 212 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಸರ್ಕಾರವು 9000 ಹೊಸ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, ಅದರಂತೆ ಈಗಾಗಲೇ 2500 ನಿರ್ವಾಹಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಿಎಂಟಿಸಿ ಯಲ್ಲಿ ಕೊನೆಗೊಂಡಿದ್ದು, ನೇಮಕಾತಿ ಆದೇಶ ನೀಡುವುದು ಬಾಕಿಯಿದೆ. 2000 ಚಾಲಕ-ಕಂ- ನಿರ್ವಾಹಕ ಹುದ್ದೆಗಳ ನೇಮಕಾತಿ ಕೆಎಸ್ ಆರ್ ಟಿ ಸಿ ಯಲ್ಲಿ, 1000 ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿದೆ. ಒಟ್ಟು 5400 ಹುದ್ದೆಗಳ ನೇಮಕಾತಿ ವಿವಿಧ ಹಂತದಲ್ಲಿದೆ. 1000 ಅನುಕಂಪ ಆಧಾರದ ನೌಕರಿ ನೀಡಲಾಗಿದೆ. ಒಟ್ಟು ಹುದ್ದೆಗಳ ನೇಮಕಾತಿ ,10,000 ಆಗಲಿದೆ.
ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 4400 ಹೊಸ ಬಸ್ಸುಗಳ ಸೇರ್ಪಡೆಯಾಗಿದ್ದು, ಉಳಿದ ಬಸ್ಸುಗಳು ಶೀಘ್ರದಲ್ಲಿಯೇ ಸೇರ್ಪಡೆಯಾಗಲಿದೆ. ಶಕ್ತಿ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಒಟ್ಟು 344. 06 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್, ನಿರ್ದೇಶಕರು (ಭದ್ರತಾ & ಜಾಗೃತ) ಅಬ್ದುಲ್ ಅಹದ್, ನಿರ್ದೇಶಕರು (ಮಾಹಿತಿ ತಂತ್ರಜ್ಞಾನ) ಶಿಲ್ಪಾ.ಎಂ., , ಪ್ರಭಾಕರ್ ರೆಡ್ಡಿ, ಮುಖ್ಯ ಸಂಚಾರ ವ್ಯವಸ್ಥಾಪಕರು ಬಿಎಂಟಿಸಿ ಹಾಗೂ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.