1 ಸಾವಿರ ವರ್ಷದ ಪುರಾತನ ದೇವಸ್ಥಾನಕ್ಕೆ ಹೊಸ ಲುಕ್ : ಸರಕಾರಕ್ಕೆ ಸೆಡ್ಡು ಹೊಡೆದು ಹಳ್ಳಿಗರಿಂದಲೇ ನಿರ್ಮಾಣ
ಹೈದರಾಬಾದ್: ಸರಕಾರ ಅನುದಾನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸೇರಿ 11 ನೇ ಶತಮಾನದ ಶಿವಾಲಯವನ್ನು ಮರುನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯ ಆತ್ಮಕೂರು ಗ್ರಾಮದಲ್ಲಿ 11 ನೇ ಶತಮಾನಕ್ಕೆ ಸೇರಿದ ಪಂಚಕೂಟ ಶಿವಾಲಯ ದೇವಸ್ಥಾನವಿತ್ತು. ನಿತ್ಯ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದರಾದರೂ, ದೇವಸ್ಥಾನ ಶಿಥಿಲವಾದ ಸ್ಥಿತಿಯಲ್ಲಿಯೇ ಇತ್ತು. ಮುಜರಾಯಿ ಇಲಾಖೆ ಗಮನಕ್ಕೆ ತಂದರೆ, ಅನುದಾನದ ಕೊರತೆ ನೆಪವೊಡ್ಡಿ ಸರಕಾರ ದೇವಸ್ಥಾನ ಜೀರ್ಣೋದ್ಧಾರ ಮಾಡಲು ನಿರಾಕರಿಸಿತು.
ಹೀಗಾಗಿ, ಗ್ರಾಮಸ್ಥರೇ ಸೇರಿಕೊಂಡು ಆತ್ಮಕೂರು ಹಾಗೂ ಸುತ್ತಮುತ್ತಲ ಗುಡೇಪಾಡ್, ತಿರುಮಲಗಿರಿ ಹಾಗೂ ಪೆದ್ದಪುರ ಗ್ರಾಮಸ್ಥರ ಸಹಕಾರದಲ್ಲಿ ನಿಧಿ ಸಂಗ್ರಹ ಮಾಡಿದ್ದರು. ಗ್ರಾಮದ ಜನತೆ 2000 ರು ನಿಂದ 15 ಲಕ್ಷದವರೆಗೆ ದೇಣಿಗೆ ನೀಡಿದ್ದರು. ಪಟ್ಟಣಗಳಲ್ಲಿ ವಾಸಿಸುವ ಗ್ರಾಮದ ಮೂಲದವರು ಹೆಚ್ಚಿನ ದೇಣಿಗೆ ನೀಡಿದ್ದು, 3.75 ಕೋಟಿ ದೇಣಿಗೆ ಸಂಗ್ರಹವಾಗಿತ್ತು.
ಈ ದೇಣಿಗೆಯನ್ನು ಬಳಸಿ ತಮಿಳುನಾಡು ಮೂಲದ ವಾಸ್ತುಶಿಲ್ಪಿ ಗಳನ್ನು ಕರೆಸಿ ದೇವಾಲಯದ ಮರುನಿರ್ಮಾಣ ಮಾಡಲಾಗಿದೆ. 20 ಕಾರ್ಮಿಕರು 18 ತಿಂಗಳು ಸತತವಾಗಿ ಕೆಲಸ ಮಾಡಿದ್ದು, ದೇವಸ್ಥಾನದ ಮರುನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮಸ್ಥರು ಇಲಾಖೆಯಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಂಡು, ಮರು ನಿರ್ಮಾಣ ಕಾರ್ಯ ಮಾಡಿದ್ದು, ಸಹಕಾರ ನೀಡಿದ ಎಲ್ಲ ಗ್ರಾಮಸ್ಥರಿಗೆ ದೇವಸ್ಥಾನ ನಿರ್ಮಾಣ ಆಡಳಿತ ಮಂಡಳಿ ಧನ್ಯವಾದ ತಿಳಿಸಿದೆ. ಈ ಮೂಲಕ ಗ್ರಾಮಸ್ಥರು ಮನಸ್ಸು ಮಾಡಿದರೆ, ಏನೂ ಬೇಕಾದರೂ ಮಾಡಬಹುದು ಎಂಬುದನ್ನು ಸಾಭೀತು ಮಾಡಿದ್ದಾರೆ.