–ಡಾ.ಟಿ.ಯಲ್ಲಪ್ಪ
ಪಂಚಗವ್ಯ ಪಂಚ ಕಾವ್ಯಗಳ ಅಭಿನಯ ಗುಚ್ಛ. ಬೆಂಗಳೂರಿನ ಕಲಾಗ್ರಾಮದಲ್ಲಿ ಅಮೋಘವಾಗಿ ಪ್ರದರ್ಶನಗೊಂಡ ಏಕವ್ಯಕ್ತಿ ರಂಗಪ್ರಯೋಗ. ಏನಿದರ ವಿಶೇಷ ಎಂದರೆ ಈಗಾಗಲೇ ಚಿಟ್ಟೆ ಎಂಬ ತನ್ನ ಏಕವ್ಯಕ್ತಿ ಪ್ರದರ್ಶನದ ಮೂಲಕ ನಾಡಿನಾದ್ಯಂತ , ಹಾಗೂ ರಾಷ್ಟ್ರದ ಹಲವು ರಾಜ್ಯಗಳಲ್ಲಿ ಗೋಕುಲ ಸಹೃದಯ (ಕವಿ, ನಾಟಕಕಾರ, ರಂಗಕರ್ಮಿ, ಪ್ರಾಧ್ಯಾಪಕ ಬೇಲೂರು ರಘುನಂದನ ಅವರ ಸುಪುತ್ರ) ಎಂಬ ಬಾಲನಟ. 84 ಪ್ರದರ್ಶನಗಳನ್ನು ಪೂರೈಸಿ ನೂರು ಪ್ರದರ್ಶನಗಳ ಕಡೆಗೆ ದಾಪುಗಾಲಿಡುತ್ತರುವ ಚಿಟ್ಟೆ ನಾಟಕದ ಈ ಬಾಲನಟನೇ ಈ ಒಂದುವರೆ ತಾಸಿಗೂ ಮೀರಿದ ಏಕವ್ಯಕ್ತಿ ನಾಟಕ ‘ಪಂಚಗವ್ಯ’ ಏಕವ್ಯಕ್ತಿ ಕಲಾವಿದ.
28-05-25 ರಂದು ಈ ಏಕವ್ಯಕ್ತಿ ನಾಟಕದ ಪ್ರದರ್ಶನ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶನ ಕಂಡಿದೆ. ಐದೂ ಕಾವ್ಯಗಳ ಪೌರಾಣಿಕ, ಸಾಮಾಜಿಕ ಪಾತ್ರಗಳನ್ನು ಗೋಕುಲ ಸಹೃದಯ ಲೀಲಾಜಾಲವಾಗಿ ತಾನೊಬ್ಬನೆ ಆವಾಹಿಸಿಕೊಂಡು, ಆವರಿಸಿಕೊಂಡು ಪಾತ್ರದಿಂದ ಪಾತ್ರಕ್ಕೆ ಚಿಟ್ಟೆಯಂತೆ ರೂಪಾಂತರಗೊಳ್ಳುತ್ತಾ, ಆಯಾ ಪಾತ್ರಗಳ ಪರಕಾಯ ಪ್ರವೇಶ ಮಾಡುತ್ತಾ, ಅರಿತ, ನುರಿತ, ಹಿರಿಯ ರಂಗಕಲಾವಿದರೇ ಮೂಗಿನ ಮೇಲೆ ಬೆರಳಿಟ್ಟು ಮೂಕವಿಸ್ಮಿತರಾಗುವಂತೆ ಒಂದೂವರೆ ತಾಸಿಗೂ ಮಿಕ್ಕಿದ ತನ್ನ ದಣಿವರಿಯದ ಅಭಿನಯದಿಂದ ರಂಗಾಸಕ್ತರ ಕಿವಿಗಡಚಿಕ್ಕುವ ಚಪ್ಪಾಳೆ, ಕೇಕೆ, ಸಿಳ್ಳೆಗಳ ನಡುವೆ ಕಳೆದು ಹೋಗದ ಈ ಬಾಲ ಪ್ರತಿಭೆ ತುಂಬಿ ಬಂದ ತನ್ನ ಆನಂದ ಮತ್ತು ಕೃತಜ್ಞತೆಗಳ ಅಶ್ರುಧಾರೆಯನ್ನು ನಾಟಕದ ಕೊನೆಯಲ್ಲಿ ಸುರಿಸಿ ತನ್ನ ವಿನಮ್ರಭಾವ ತೋರಿದ್ದಾನೆ.
ಗೋಕುಲ ಸಹೃದಯ ಅಭಿನಯಿಸಿದ ಅಷ್ಟೂ ಪಾತ್ರಗಳೂ ಆತನ ಅಭಿನಯ ಸಾಮರ್ಥ್ಯದ ಐದು ವಿಭಿನ್ನ ಆಯಾಮಗಳನ್ನು ಹಾಗೂ ಮನೋಧರ್ಮಾನುಸಾರಿಯಾದ ವಿಭಿನ್ನ ಪಾತ್ರಗಳ ವ್ಯಕ್ತಿತ್ವದ ಪರಕಾಯಪ್ರವೇಶ, ತಲ್ಲೀನತೆ, ಏಕಕಾಲಕ್ಕೆ ಹಲವು ಪಾತ್ರಗಳಿಗೆ ರೂಪಾಂತರಗೊಳ್ಳುವಾಗಿನ ಸವಾಲುಗಳನ್ನು ಮುಂದಿಟ್ಟುಕೊಂಡೇ ಒಂದು ಇನ್ನೊಂದು,ಮತ್ತೊಂದು ಮಗದೊಂದಾಗಿ ವಿಘಟನೆಗೊಳ್ಳುತ್ತಲೇ ಎಲ್ಲದರೊಳೊಂದಾಗಿ. ಎಲ್ಲಪಾತ್ರಗಳಿಗೂ ಜೀವದಾನಗೈವ ಏಕಪಾತ್ರಾಭಿನಯದ ಬಹುಮುಖೀ ಸಾಧ್ಯತೆಗಳನ್ನು ಸೂರೆಗೊಳ್ಳುವ ಅವನ ಭಾವರಮ್ಯ, ಧ್ವನಿರಮ್ಯ, ಅಭಿನಯರಮ್ಯ ನಟನೆಯಿಂದ ಸಾಧಿಸಿದ್ದಾನೆ.
ಪೌರಾಣಿಕ ಪಾತ್ರಗಳನ್ನು ಈ ಕಾಲದ ಅಭಿಜಾತ ಪ್ರತಿಭೆಯೊಂದು ಆವಾಹಿಸಿಕೊಂಡು ತಾನೇ ಅದಾಗುವುದರ ಮೂಲಕ ,ಮತ್ತೆ ಅವೆಲ್ಲಾ ಪಾತ್ರಗಳು ಸಮಕಾಲೀನ ವಾಸ್ತವಗಳ ಕಡೆ ಮುಖಮಾಡಿ, ಬೆರಳು ತೋರಿಸಿ, ಪ್ರೇಕ್ಷಕನಿಗೆ ಪೌರಾಣಿಕ ಕನ್ನಡಿಯೊಳಗೆ ಆಧುನಿಕದ ಆತಂಕಿತ ಮುಖಗಳ ದರುಶನವನ್ನು ಮಾಡಿಸಿ ಮತ್ತೆ ಪುರಾಣದ ಕಡೆಗೂ ..ವಾಸ್ತವದ ಕ್ಷಿತಿಜಗಳಿಗೂ ಜೀಕುತ್ತಾ ಸಾಗುವಂತೆ ಒಬ್ಬನೇ ನಟ ಇಡೀ ರಂಗಮಂದಿರವನ್ನೂ. ಪ್ರೇಕ್ಷಕ ಪ್ರಭುವಿನ ಮನೋರಂಗವನ್ನೂ ಆವರಿಕೊಳ್ಳುತ್ತಾ ಸಾಗುವ ಬೆರಗನ್ನು ಗೋಕುಲ ಸಹೃದಯ ಇಷ್ಟು ಸಣ್ಣ ವಯಸ್ಸಿಗೆ ಸಾಧಿಸಿರುವುದು ರಂಗಭೂಮಿಯಲ್ಲಿ ಹೊಸ ಸಂಚಲನವನ್ನು ,ವಿಕ್ರಮವನ್ನೂ ಆಗುಮಾಡಿದೆ .
ಈ ನಾಟಕದ ರಚನೆ, ವಿನ್ಯಾಸ, ಸಂಗೀತ, ನಿರ್ದೇಶನ ಮಾಡಿರುವ ಡಾ.ಎಸ್.ಎಲ್.ಎನ್ ಸ್ವಾಮಿ ಅವರು ಗೋಕುಲ ಸಹೃದಯನ ಅಭಿನಯ ಸಾಮರ್ಥ್ಯವನ್ನು ಮತ್ತೂ ಪುಟಕ್ಕಿಟ್ಟ ಬಂಗಾರವಾಗಿಸಿದ್ದಾರೆ. ಈ ನಾಟಕದ ಪ್ರಮುಖವಾದ ಆಕರ್ಷಣೆ ಎಂದರೆ ಈ ನಟನಿಗೆ ಪ್ರಸಾಧನವನ್ನು ಮಾಡಿರುವ, ಗೌತಮ್ ಮತ್ತು ಅತ್ಯಂತ ವರ್ಣರಂಜಿತವೂ ಪೌರಾಣಿಕ ಪರಿವೇಶ ಮತ್ತು ಪರ್ಯಾವರಣಕ್ಕೆ ಒಪ್ಪುವಂತಹ ಬೆಳಕಿನ ವಿನ್ಯಾಸವನ್ನು ಒದಗಿಸಿರುವ ರವಿಶಂಕರ್, ವಸ್ತ್ರಾಂಕಾರ ಮಾಡಿರುವ ಶ್ವೇತಾಶ್ರೀನಿವಾಸ್ ಅವರುಗಳದ್ದು. ಶಬರೀಶ್ ಮತ್ತು ಸಹೃದಯನ ಹಿನ್ನೆಲೆ ಗಾಯನ, ಸಮರ್ಥ ಅವರ ವಾದ್ಯಸಂಗೀತ, ಲೋಕೇಶ್ ಕುಮಾರ್ ಅವರುಗಳ ಸಂಗೀತ ನಾಟಕಕ್ಕೆ ಮಾಧುರ್ಯದ ಸ್ಪರ್ಶವನ್ನು ಒದಗಿಸಿದೆ.
ರಂಗತಜ್ಞರು, ರಂಗಪ್ರೇಮಿಗಳು ಹಾಗೂ ಕನ್ನಡದ ಜನಮಾನಸ ಈ ಬಾಲಪ್ರತಿಭೆಯನ್ನು ತಮ್ಮ ಮಡಿಲಿಗಿರಿಸಿಕೊಂಡರೆ ಅದೇ ಅವನ ಮತ್ತು ಅವನಿಗೆ ಜನ್ಮವಿತ್ತ ತಂದೆ ತಾಯಿಗಳಾದ ನಮ್ಮಗಳ ಬದುಕಿನ ಸಾರ್ಥಕತೆ ಎನ್ನುತ್ತಾರೆ ಈ ಕಲಾವಿದನ ತಂದೆ ರಂಗಕರ್ಮಿ ಡಾ.ಬೇಲೂರು ರಘುನಂದನ ಅವರು. ಗೋಕುಲ ಸಹೃದಯ ನಿನಗಿದೋ ಮನದಾಳದ ಮನತುಂಬಿದ ಅಭಿನಂದನೆಗಳು.ಕನ್ನಡ ರಂಗಭೂಮಿಯ ಭವಿತವ್ಯದ ಮಿನುಗುತಾರೆಯಾಗಿ ಸದಾ ಹೊಳೆಯುತ್ತಿರು ಎಂದು ಎಲ್ಲಾ ರಂಗಪ್ರೇಮಿಗಳೂ ಮನದುಂಬಿ ಹಾರೈಸುತಿದ್ದಾರೆ.
ಶುಭವಾಗಲಿ ಈ ಅಭಿಜಾತ ಪ್ರತಿಭೆಗೆ.
ರಂಗತಜ್ಞರು, ರಂಗಪ್ರೇಮಿಗಳೂ ಹಾಗು ಕನ್ನಡದ ಜನಮಾನಸ ಈ ಬಾಲ ಪ್ರತಿಭೆಯನ್ನು ಪ್ರೀತಿಯಿಂದ ತಮ್ಮ ಮಡಿಲಿಗಿರಿಸಿಕೊಂಡರೆ ಅದೇ ಸಾರ್ಥಕತೆಯ ಕ್ಷಣ ಎನ್ನುತ್ತಾರೆ ಈ ಬಾಲನಟನ ತಂದೆ ಕವಿ ನಾಟಕಕಾರ,ರಂಗಕರ್ಮಿ ಬೇಲೂರು ರಘುನಂದನ ಅವರು. ತನ್ನ ಮೊದಲ ಪ್ರದರ್ಶನದಲ್ಲೇ Asia book of Records ನಲ್ಲಿ ಸೇರಿಹೋದ ಪಂಚಗವ್ಯ ನಾಟಕಕ್ಕೂ ಮತ್ತು ಗೋಕುಲ ಸಹೃದಯ ನಿನಗಿದೋ ಮನದಾಳದ ಮನತುಂಬಿದ ಅಭಿನಂದನೆಗಳು.