ದುಬೈ : ಇಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ನ ಎರಡನೇ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಿ ಟೀಮ್ ಇಂಡಿಯಾ ಆರು ವಿಕೆಟ್ ಗಳ ಭರ್ಜರಿ ಜಯಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮುನೀಬ ಅಲಿ ಮತ್ತು ಗುಲ್ ಫೀರೋಜ ಗೆ ಟೀಮ್ ಇಂಡಿಯಾದ ಮೊದಲ ಓವರ್ ಮಾಡಲು ಬಂದ ರೇಣುಕಾ ಸಿಂಗ್ ಠಾಕೂರ್ ಆಘಾತ ನೀಡಿದರು. ಬಳಿಕ ಮುನೀಬ ಅಲಿ 17 ರನ್ ಗಳಿಸಿ ಪೆವಿಲಿಯನ್ ಸೇರಿದರು.
ನಂತರ ನಿಧ ದರ್ ರವರ 28 ರನ್ ಬಿಟ್ಟರೆ ಇನ್ಯಾವ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್ ಕಚ್ಚಿ ನಿಂತು ರನ್ ಕಲೆ ಹಾಕಲು ಸಾಧ್ಯವಾಗಲಿಲ್ಲ. ಸೀಮಿತ 20 ಓವರ್ ಗಳನ್ನು ಪೂರ್ಣಗೊಳಿಸಿದ ಪಾಕಿಸ್ತಾನ, 8 ವಿಕೆಟ್ ಕಳೆದುಕೊಂಡು 105 ರನ್ ಗಳ ಟಾರ್ಗೆಟ್ ಅನ್ನು ನೀಡಿತು.
ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಬೋಲಿಂಗ್ ವೈಫಲ್ಯ ಅನುಭವಿಸಿದ್ದ ಭಾರತ, ಇಂದು ಪಾಕಿಸ್ತಾನದ ವಿರುದ್ಧ ಕಂಬ್ಯಾಕ್ ಮಾಡಿತು. ಟೀಮ್ ಇಂಡಿಯಾ ಪರ ಬೌಲಿಂಗ್ ಮಾಡಿದ ಅರುಂಧತಿ ರೆಡ್ಡಿ 3 ವಿಕೆಟ್ ಪಡೆದು ಮಿಂಚಿದರು. ಇನ್ನು ಶ್ರೇಯಂಕ ಪಾಟೀಲ್ 2, ಆಶಾ ಶೋಭನ, ದೀಪ್ತಿ ಶರ್ಮ, ರೇಣುಕಾ ಸಿಂಗ್ ಠಾಕೂರ್, ತಲಾ ಒಂದು ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ ನಲ್ಲಿ ಟಾರ್ಗೆಟನ್ನು ಬೆನ್ನತ್ತಲು ಬಂದ ಟೀಮ್ ಇಂಡಿಯಾದ ಆಟಗಾರ್ತಿಯರಾದ ಸ್ಮಿತಿ ಮಂದಾನ 7 ರನ್ ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು. ಇನ್ನೊಂದಡೆ ಕ್ರೀಸ್ ಕಚ್ಚಿ ನಿಂತ ಶಾಫಾಲಿ ವರ್ಮ 35 ಬಾಲ್ ಗಳಲ್ಲಿ 32 ರನ್ ಗಳಿಸಿದರು.
ಬಳಿಕ ಬಂದ ಜಮೀಮ ರೋಡ್ರಿಗಸ್ ರವರ 23 ರನ್ ಮತ್ತು ನಾಯಕಿ ಹಾರ್ಮನ್ ಪ್ರೀತ್ ಕೌರ್ ಅವರ 29 ರನ್ ಗಳ ಸಹಾಯದಿಂದ ಟೀಮ್ ಇಂಡಿಯಾ 18.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಟಾರ್ಗೆಟನ್ನು ಬೆನ್ನತ್ತಲು ಯಶಸ್ವಿಯಾಯಿತು.
ಶಿವರಾಜು ವೈ. ಪಿ
ಎಲೆರಾಂಪುರ