22ಕ್ಕೇರಿದ ಪಾಕ್ ಪ್ರಜೆಗಳ ಬಂಧಿತರ ಸಂಖ್ಯೆ
ಆನೇಕಲ್: ಜಿಗಣಿಯಲ್ಲಿ ಪಾಕಿಸ್ತಾನದ ಪ್ರಜೆ ಪರ್ವೇಜ್ ಬಂಧನದ ಬೆನ್ನಲ್ಲೇ ಬಂಧಿತ ಪಾಕ್ ಪ್ರಜೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಬಂಧಿತ ಪಾಕ್ ಪ್ರಜೆಗಳೆಲ್ಲ ಧರ್ಮ ಪ್ರಚಾರಕ್ಕಾಗಿ ಭಾರತಕ್ಕೆ ನುಸುಳಿದ್ದಲ್ಲದೆ, ವಿವಿಧ ರಾಜ್ಯಗಳಲ್ಲಿ ಬೀಡುಬಿಟ್ಟಿದ್ದರು ಎನ್ನಲಾಗಿದೆ.
14 ಮಂದಿಯ ಬಂಧನದೊಂದಿಗೆ ದೇಶದಲ್ಲಿ ಜಿಗಣಿ ಹಾಗೂ ಕರ್ನಾಟಕ ಪೊಲೀಸರು ಬಂಧಿಸಿದ ಪಾಕಿಸ್ತಾನಿ ಪ್ರಜೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇವರೆಲ್ಲ ದೇಶದ ನಾನಾ ಭಾಗಗಳಲ್ಲಿ ಅಡಗಿ ಕುಳಿತಿದ್ದರು. ಪ್ರಕರಣದ ಕಿಂಗ್ಪಿನ್ ಪರ್ವೇಜ್ ಬಂಧನದ ಬೆನ್ನಲ್ಲೇ ಇನ್ನಿತರರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು: ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳು ಅರೆಸ್ಟ್ ಆದ ಬೆನ್ನಲ್ಲೇ ಹೆಚ್ಚಿನ ತನಿಖೆಗಾಗಿ ಪೊಲೀಸರ 4 ತಂಡಗಳ ರಚನೆ ಮಾಡಿ ವಿವಿಧ ರಾಜ್ಯಗಳಿಗೆ ಕಳುಹಿಸಿಕೊಡಲಾಗಿತ್ತು. ಚೆನ್ನೈ, ದೆಹಲಿ, ಹೈದರಾಬಾದ್ಗೆ ತೆರಳಿದ್ದ ಪೊಲೀಸರ ತಂಡ ಮೆಹದಿ ಫೌಂಡೇಷನ್ ಸಂಪರ್ಕದಲ್ಲಿದ್ದ ಒಟ್ಟು 22 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪೀಣ್ಯದಲ್ಲಿ ವಾಸವಿದ್ದ ಬಂಧಿತ ದಂಪತಿಯ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಈ ದಂಪತಿ ಮೂರು ವರ್ಷಗಳಿಂದ ಪೀಣ್ಯದ ಆಂಧ್ರಹಳ್ಳಿ ಮುಖ್ಯರಸ್ತೆಯ ಮನೆಯಲ್ಲಿ ನಿಗೂಢವಾಗಿ ನೆಲೆಸಿದ್ದರು ಎಂಬುದು ಗೊತ್ತಾಗಿದೆ. ಮನೆಯಿಂದ ಹೊರ ಬಾರದೆ ಒಳಗಡೆಯೇ ನೆಲೆಸಿದ್ದರು ಎನ್ನಲಾಗಿದೆ.
ಪಾಕ್ ಮೂಲದ ಸೈಯದ್, ಆತನ ಪತ್ನಿ ಹಾಗೂ ಮಗಳು ಹೆಸರು ಬದಲಿಸಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದರು. ಹೊರ ಜಗತ್ತಿನ ಸಂಪರ್ಕ ಇಲ್ಲದೆ ಗೌಪ್ಯವಾಗಿ ನೆಲೆಸಿದ್ದ ಮಾಹಿತಿ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
2019ರಲ್ಲಿ ಬೆಂಗಳೂರಿಗೆ ಬಂದಿದ್ದ ಸೈಯದ್ ಮತ್ತು ಕುಟುಂಬ ಅಂದಿನಿಂದ ಧರ್ಮ ಪ್ರಚೋದಕರಾಗಿ ಕೆಲಸ ಮಾಡುತ್ತಿದ್ದರು. ಯೂಟ್ಯೂಬ್ನಲ್ಲಿ ಪ್ರಚಾರ ಕಾರ್ಯ ಮಾಡುತ್ತಾ ಇದ್ದರು. ಇವರು ಭಾರತಕ್ಕೆ 2014ರಲ್ಲೇ ಬಂದಿದ್ದರು. ನಕಲಿ ಹೆಸರಲ್ಲಿ ಆಧಾರ್ ಮಾಡಿಸಿಕೊಂಡಿದ್ದರು ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.


