ಬೆಣ್ಣೆಹಳ್ಳ ಯೋಜನೆಗೆ ಅಸ್ತು ಎಂದ ಸರಕಾರದ ನಿರ್ಧಾರಕ್ಕೆ ಸಂತಸ | ಸರಕಾರದ ನಮ್ಮ ಭಾಗದ ರೈತರ ಹಿತ ಕಾಪಾಡಿದೆ ಎಂದ ಎನ್.ಎಚ್.
ರಾಜ್ಯ ಸರಕಾರ ಸಚಿವ ಸಂಪುಟ ಸಭೆಯಲ್ಲಿ ಧಾರವಾಡ ಜಿಲ್ಲೆಯ ಬೆಣ್ಣೆಹಳ್ಳ ಯೋಜನೆಗೆ 200 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಯೋಜನೆಗಾಗಿ ಹೋರಾಟ ನಡೆಸಿದ, ರೈತ ಹೋರಾಟಗಾರ, ಶಾಸಕ ಎನ್.ಎಚ್. ಕೋನರೆಡ್ಡಿ ವೈಟ್ ಪೇಪರ್ ಜತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
- ಬೆಣ್ಣೆ ಹಳ್ಳ ಯೋಜನೆ ಉತ್ತರ ಕರ್ನಾಟಕ ಭಾಗದ ಬಹುದಿನದ ಕನಸು, ಅದು ಈಡೇರಿದೆ. ನಿಮ್ಮ ಅಭಿಪ್ರಾಯ ಏನು?
ಬೆಣ್ಣೆಹಳ್ಳ ಯೋಜನೆಗೆ ರಾಜ್ಯ ಸರಕಾರ ಮೊದಲ ಹಂತದಲ್ಲಿ 200 ಕೋಟಿ ಅನುದಾನ ನೀಡಿದೆ. ಇದು ನಮಗೆ ಹಂಡೆ ಕಾಲು ಕುಡಿದಷ್ಟು ಸಂತಸವಾಗಿದೆ. ಯೋಜನೆ ಜಾರಿಗೆ ತಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಎಲ್ಲ ಸಚಿವರಿಗೆ ನಾನು ನಮ್ಮ ಭಾಗದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
*ಬೆಣ್ಣೆಹಳ್ಳ ಯೋಜನೆಯಿಂದ ಉತ್ತರ ಕರ್ನಾಟಕಕ್ಕೆ ಆಗುವ ಅನುಕೂಲಗಳೇನು?
ಬೆಣ್ಣೆಹಳ್ಳ ಹಾವೇರಿ ಜಿಲ್ಲೆಯಲ್ಲಿ ಧಾರವಾಡ, ಬಾಗಲಕೋಟ ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುತ್ತದೆ. ಕುಂದಗೋಳ, ಹುಬ್ಬಳ್ಳಿ, ನವಲಗುಂದ, ನರಗುಂದ ತಾಲೂಕುಗಳಲ್ಲಿ ಹರಿಯುವ ಬೆಣ್ಣೆಹಳ್ಳ ನಂತರ ಮಲಪ್ರಭಾ ನದಿಗೆ ಸೇರುತ್ತದೆ. ಈ ವೇಳೆ 16 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಇದರಿಂದ ಈ ಭಾಗದ ರೈತರಿಗೆ ಸಮಸ್ಯೆಯಾಗುತ್ತಿತ್ತು. ಬೆಳೆ ನಾಶವಾಗುತ್ತಿತ್ತು. ಇದೆಲ್ಲದ್ದಕ್ಕೂ ಶಾಶ್ವತ ಪರಿಹಾರ ಸಿಗಲಿದೆ.
*ಸರಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟದ ಬಗ್ಗೆ ನಿಮ್ಮ ಅನಿಸಿಕೆಯೇನು?
ರಾಜ್ಯಪಾಲರು ಬಿಜೆಪಿ ಪಕ್ಷದ ವಕ್ತಾರರಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಆ ಸಂವಿಧಾನಿಕ ಹುದ್ದೆಯ ಘಟನೆಗೆ ಧಕ್ಕೆಯನ್ನುಂಟು ಮಾಡುತ್ತದೆ. ರಾಜ್ಯಪಾಲರು ಪಕ್ಷಾತೀತವಾಗಿ ನಡೆದುಕೊಳ್ಳಲಿ, ನಾವು ಅವರಿಗೆ ಸಹಕಾರ ನೀಡುತ್ತೇವೆ. ಆದರೆ, ಅವರು ಪತ್ರ ಬರೆಯುತ್ತಿರುವುದು, ಸಿಎಂ ವಿರುದ್ಧದ ಆರೋಪಗಳಿಗೆ ಅವರು ಕೊಡುತ್ತಿರುವ ಪ್ರತಿಕ್ರಿಯೆ ಅನುಮಾನ ಮೂಡಿಸುತ್ತಿದೆ. ಹೀಗಾಗಿ, ಅವರಿಗೆ ಕೊಡುವ ಮಾಹಿತಿಯನ್ನು ಕ್ಯಾಬಿನೆಟ್ ಮುಂದಿಟ್ಟು ನಂತರ ನೀಡುವಂತೆ ಸಚಿವ ಸಂಪುಟ ತೀರ್ಮಾನಿಸಿದೆ. ಇದರಲ್ಲಿ ತಪ್ಪೇನಿದೆ?
*ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದೆ ಅನ್ನಿಸುವುದಿಲ್ಲವೇ?
ಮೂಡಾ ಪ್ರಕರಣದ ಸಂಬಂಧ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ತನಿಖೆಗೆ ನಮ್ಮ ಸರಕಾರ ಸಿದ್ಧವಿದೆ. ಸಿದ್ದರಾಮಯ್ಯ ಅವರು ತನಿಖೆಗೆ ಹೆದರುವುದಾಗಿದ್ದರೆ, ಅವರು ನ್ಯಾಯಾಂಗ ಸಮಿತಿ ರಚನೆ ಮಾಡುತ್ತಿರಲಿಲ್ಲ. ಈಗಾಗಲೇ, ನ್ಯಾಯಾಂಗ ಸಮಿತಿ ರಚನೆ ಮಾಡಲಾಗಿದೆ ಇದೀಗ ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ತನಿಖೆಯನ್ನು ಎದುರಿಸಲು ಸಿಎಂ ಸಿದ್ದರಾಮಯ್ಯ ಸಿದ್ಧರಿದ್ದಾರೆ. ಅವರ ಆರೋಪ ಮುಕ್ತರಾಗಿ ಹೊರಬರುತ್ತಾರೆ ಎಂಬ ನಂಬಿಕೆ ನನಗಿದೆ.
*ಸಿದ್ದರಾಮಯ್ಯ ಅವರ ವಿರುದ್ಧ ಪಕ್ಷದೊಳಗೆ ಅಸಮಾಧಾನ ಶುರುವಾಗಿದೆಯಲ್ಲಾ?
ಪಕ್ಷದೊಳಗೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ಅಸಮಾಧಾನ ಇಲ್ಲ. ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ. ಕೆ.ಶಿವಕುಮಾರ್ ಅವರು, ಸಿದ್ದರಾಮಯ್ಯ ಬೆನ್ನಿಗೆ ಬಂಡೆಯಂತೆ ನಿಂತಿದ್ದಾರೆ. ಅವರ ಜತೆಯಲ್ಲಿ ಇಡೀ ಸಚಿಚ ಸಂಪುಟ, 136 ಶಾಸಕರು ಇದ್ದೇವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಇಡೀ ಪಕ್ಷ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗಿದೆ.