ನೋಯ್ಡಾ: ನೀಟ್ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಟಾಪರ್ ಆಗಿದ್ದ ಸಮೋಸ ಮಾರಾಟ ಮಾಡುವ ಹುಡುಗನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ ಟ್ರೆಂಡ್ ಆಗಿದೆ.
ಸಮೋಸ ಮಾರಾಟ ಮಾಡುತ್ತಲೇ ತನ್ನ ಎರಡನೇ ಪ್ರಯತ್ನದಲ್ಲಿ ನೀಟ್ ಟಾಪರ್ ಆದ ಹುಡುಗನ ಸಿದ್ಧತೆ ಬಗ್ಗೆ ಅಲಕ್ ಪಾಂಢೆ ಎಂಬುವವರು ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಅದರಲ್ಲಿ ಸಮೋಸ ಮಾರಾಟ ಮಾಡಿ ನೀಟ್ ಟಾಪರ್ ಆದ ಹುಡುಗ ಸನ್ನಿ ಕುಮಾರ್ ತನ್ನ ಸಾಧನೆ ಬಗ್ಗೆ ಹೇಳಿಕೊಂಡಿದ್ದಾನೆ.
ಸನ್ನಿ ಕುಮಾರ್ ತನ್ನ ಕೋಣೆಯ ಗೋಡೆಗಳ ಮೇಲೆಲ್ಲ ಪರೀಕ್ಷೆಗೆ ಅಗತ್ಯವಾದ ನೋಟ್ ಗಳನ್ನು ಮಾಡಿಕೊಂಡಿದ್ದು, ಪರೀಕ್ಷೆಗೆ ನಡೆಸಿದ ಸಿದ್ದತೆ ಮಡೆಸುತ್ತಿದ್ದ. ಕಾಲೇಜು ಮುಗಿಸಿ ಸಂಜೆ 4 ಗಂಟೆಯಿಂದ ರಾತ್ರಿ ಎಂಟು ಗಂಟೆವರೆಗೆ ಸಮೋಸ ಮಾರಾಟ ಮಾಡಿ, ನಿತ್ಯ ಸುಮಾರು 500-600 ರುಪಾಯಿ ಸಂಪಾದನೆ ಮಾಡುತ್ತಿದ್ದ ಎನ್ನಲಾಗಿದೆ.
ತಂದೆಯಿಲ್ಲದ ಸನ್ನಿಕುಮಾರ್ ಗೆ ಅವರ ಚಿಕ್ಕಪ್ಪ ವಿದ್ಯಾಬ್ಯಾಸಕ್ಕೆ ನೆರವಾಗಿದ್ದರು. ಆದರೆ, ಅವರ ಸಾವಿನ ನಂತರ ವಿದ್ಯಾಭ್ಯಾಸ ಕಷ್ಟವಾಯಿತು. ಹೀಗಾಗಿ, ಮೊದಲಿಗೆ ಸನ್ನಿ ಮತ್ತು ತಾಯಿ ತರಕಾರಿ ಗಾಡಿ ಹಾಕಿಕೊಂಡಿದ್ದರು. ಅದು ಸರಿಯಾಗಿ ನಡೆಯದೆ ನಷ್ಟವಾದ ಕಾರಣ ತನ್ನ ತಾಯಿಗೆ ಬರುತ್ತಿದ್ದ ಸಮೋಸ ತಯಾರಿಕೆಯನ್ನೇ ಬದುಕಾಗಿಸಿಕೊಂಡ ಸನ್ನಿ, ತಾಯಿ ತಯಾರಿಸಿದ ಸಮೋಸಗಳನ್ನು ಸಂಜೆ ವೇಳೆ ಮಾರಾಟ ಮಾಡುತ್ತಿದ್ದ.
ಇಷ್ಟೆಲ್ಲ ಕಷ್ಟಗಳನ್ನು ಎದುರಿಸಿದ ಸನ್ನಿಕುಮಾರ್ ಎರಡನೇ ಪ್ರಯತ್ನದ ನೀಟ್ ಟಾಪರ್ ಆಗಿದ್ದಾನೆ. ಮೊದಲ ಸಲ ಪರೀಕ್ಷೆ ಬರೆದಿದ್ದ ಆತ, 292 ಅಂಕಗಳನ್ನು ಪಡೆದುಕೊಂಡಿದ್ದ. ಎರಡನೇ ಪ್ರಯತ್ನದಲ್ಲಿ ಆತ 720 ಅಂಕಗಳಿಗೆ 664 ಅಂಖಗಳನ್ನು ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾನೆ.