ಬೆಂಗಳೂರು: 70 ವರ್ಷ ಮೇಲ್ಪಟ್ಟ ಎಲ್ಲಾ ವೃದ್ಧರು ಆಯುಷ್ಮಾನ್ ಭಾರತ್ ಯೋಜನೆಯಡಿ 5ಲಕ್ಷ ವರೆಗೆ ಆರೋಗ್ಯ ವಿಮೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಈ ಮೊದಲು ಈ ಯೋಜನೆಯು ಎಲ್ಲಾ ವರ್ಗದ ಹಿರಿಯರನ್ನು ಒಳಗೊಂಡಿರಲಿಲ್ಲ. ಈಗ 70 ವರ್ಷ ಮೇಲ್ಪಟ್ಟ ಎಲ್ಲಾ ಜನರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಆಯುಷ್ಮಾನ್ ಯೋಜನೆಯಡಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.
ಬುಧವಾರ ಕೇಂದ್ರ ಸರ್ಕಾರ ಈ ಮಹತ್ವದ ಘೋಷಣೆ ಮಾಡಿದೆ. 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವೃದ್ಧರನ್ನು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY)ಗೆ ಸೇರಿಸಲಾಗುತ್ತದೆ. ಇದರಿಂದ ಸುಮಾರು 4.5 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ. ಈ ಕುಟುಂಬಗಳಲ್ಲಿ 6 ಕೋಟಿ ವೃದ್ಧರಿದ್ದಾರೆ. ಅವರು ಕುಟುಂಬವನ್ನು ಅವಲಂಬಿಸಿ 5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆಯನ್ನು ಪಡೆಯುತ್ತಾರೆ.
ಅರ್ಹ ಹಿರಿಯ ನಾಗರಿಕರಿಗೆ AB PM-JAY ಅಡಿಯಲ್ಲಿ ಹೊಸ ಪ್ರತ್ಯೇಕ ಕಾರ್ಡ್ ನೀಡಲಾಗುತ್ತದೆ. ಈಗಾಗಲೇ AB PM-JAY ವ್ಯಾಪ್ತಿಗೆ ಒಳಪಡುವ ಕುಟುಂಬಗಳಿಗೆ ಸೇರಿದ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಇದರ ಸವಲತ್ತು ಪಡೆಯಬಹುದು.