ಚಚಡಿ ಸಂಗಮೇಶ್ವರ ರಥದ ಕಳಸ ಬಿದ್ದು ಬಾಲಕ ದುರ್ಮರಣ

Share It

ಬೆಳಗಾವಿ : ಸವದತ್ತಿ ತಾಲೂಕು ಚಚಡಿ ಗ್ರಾಮದಲ್ಲಿ ಸೋಮವಾರ ನಡೆದ ಸಂಗಮೇಶ್ವರ ದೇವರ ರಥೋತ್ಸವದ ಸಂದರ್ಭದಲ್ಲಿ ರಥದ ಮೇಲಿನ ಬೆಳ್ಳಿಯ ನವಿಲು ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಶಿವಾನಂದ ರಾಜಕುಮಾರ ಸಾವಳಗಿ (13 ವರ್ಷ) ಮೃತಪಟ್ಟ ಬಾಲಕ. ಶ್ರಾವಣ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಂಗಮೇಶ್ವರ ದೇವರ ರಥೋತ್ಸವಕ್ಕೆ ಸಿದ್ಧತೆ ನಡೆದಿತ್ತು. 30 ಅಡಿ ಎತ್ತರದ ರಥದ ಮೇಲಿನ ಕಳಸದ ಮೇಲಿನ 5 ಕೆಜಿ ಭಾರವಿರುವ ಬೆಳ್ಳಿಯ ನವಿಲು ಪ್ರತಿಷ್ಠಾಪನೆ ಮಾಡಲಾಗಿತ್ತು. ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಜಾತ್ರೆಯಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಬೆಳ್ಳಿಯ ನವಿಲನ್ನು ಇಡಲಾಗಿತ್ತು.

ರಥ ಸಂಚರಿಸಬೇಕಾದ ರಸ್ತೆ ಸಂಪೂರ್ಣ ತಗ್ಗು ದಿಣ್ಣೆಗಳಿಂದ ಕೂಡಿದೆ. ದೇವಸ್ಥಾನದಿಂದ ರಥವನ್ನು ತುಸು ದೂರ ಎಳೆದುಕೊಂಡು ಹೋದ ಬಳಿಕ ರಥದ ಚಕ್ರಗಳು ತಗ್ಗಿನಲ್ಲಿ ಸಿಲುಕಿವೆ. ಜನ ಜೋರಾಗಿ ರಥ ಎಳೆದಾಗ ಹೊರಳಾಡಿದೆ.

ಆಗ ರಥದ ಮೇಲಿನ ಬೆಳ್ಳಿಯ ನವಿಲು ಕಿತ್ತು ಬಂದು ಕೆಳಗಡೆ ಇದ್ದ ಬಾಲಕನ ಮೇಲೆ ಬಿದ್ದಿದೆ. ಅದು ಏಕಾಏಕಿ ಬಾಲಕನ ತಲೆಯ ಮೇಲೆ ಬಿದ್ದ ಪರಿಣಾಮ ಆತ ಮೃತಪಟ್ಟಿದ್ದಾನೆ. ತಕ್ಷಣ ರಥೋತ್ಸವವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ.


Share It

You May Have Missed

You cannot copy content of this page