ಬೆಂಗಳೂರು: ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿದ್ದು, ಅನೇಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಮೃತಪಟ್ಟವರ ಸಂಖ್ಯೆಯನ್ನು ಸರಕಾರ ಈವರೆಗೆ ಧೃಡಪಡಿಸಿಲ್ಲ.
ಬೆಳಗಾವಿಯ ನಾಲ್ವರು ಮಹಿಳೆಯರು ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮತ್ತಷ್ಟು ಕನ್ನಡಿಗರು ಗಾಯಗೊಂಡಿರುವ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೆ, ರಾಜ್ಯದಿಂದ ಹೋಗಿದ್ದ ಭಕ್ತರ ಪೈಕಿ ಯಾರಾದರೂ ಮೃತಪಟ್ಟಿದ್ದಾರಾ ಎಂಬ ಬಗ್ಗೆ ಮಾಹಿತಿಯಂತೂ ಇನ್ನೂ ಸಿಕ್ಕಿಲ್ಲ. ಹೀಗಾಗಿ, ಉತ್ತರ ಪ್ರದೇಶ ಸರಕಾರದ ಮಾಹಿತಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಕಾಲ್ತುಳಿತ ಸಂಭವಿಸಿರುವ ಬಗ್ಗೆ, ಅಲ್ಲಿ ಆಗಿರುವ ಸಮಸ್ಯೆ ಬಗ್ಗೆ ಮಾತ್ರವೇ ಸಿಎಂ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಆದರೆ, ಮೃತಪಟ್ಟರ ನಿಖರ ಮಾಹಿತಿ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದು ಕುಂಭಮೇಳಕ್ಕೆ ತೆರಳಿರುವ ಭಕ್ತರ ಆತಂಕವನ್ನು ಹೆಚ್ಚಿಸಿದೆ. ಕುಟುಂಬಸ್ಥರ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಮೋದಿ ಅನೇಕ ಬಾರಿ ಕರೆ ಮಾಡಿ ಪರಿಸ್ಥಿತಿ ವಿಚಾರಣೆ ಮಾಡಿದ್ದಾರೆ. ಅಧಿಕಾರಿಗಳಿಂದ ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ, ಸಾವಿನ ಸಂಖ್ಯೆ ಬಗ್ಗೆ ನಿಖರವಾಗಿ ಮಾತ್ರ ಮಾತನಾಡುತ್ತಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆ ಹೆಚ್ಚಾಗತೊಡಗಿದೆ.