ಮೀರತ್: ಯುವಕನೊಬ್ಬನ ಮೇಲೆ ಕೇಳಿಬಂದ ಕಿಡ್ನಾಪ್ ಸುಳ್ಳಾರೋಪದಿಂದ ಆತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಲೆಂದ್ ಶಹರ್ ನಗರದಲ್ಲಿ ನಡೆದಿದೆ.
ಕುಂಕಮ್ ಸಿಂಗ್ ಎಂಬ 22 ವರ್ಷದ ಬಿಎ ವಿದ್ಯಾರ್ಥಿನಿ ಮೇ. 2 ರಂದು ನಾಪತ್ತೆಯಾಗಿದ್ದರು. ಆಕೆಯ ಕುಟುಂಬಸ್ಥರು ಅರ್ಜುನ್ ಸಿಂಗ್ ಎಂಬ 22 ವರ್ಷದ ವ್ಯಕ್ತಿಯ ಮೇಲೆ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದರು. ಆತ ಪೆಟ್ರೋಲ್ ಬಂಕ್ ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಕುಂಕುಮ ಸಿಂಗ್ ಜತೆಗೆ ಈ ಹಿಂದೆ ಅರ್ಜುನ್ ಸಿಂಗ್ ಸಲುಗೆಯಿಂದಿದ್ದ ಎಂಬ ಕಾರಣಕ್ಕೆ ಆತನ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದರು. ಅವರ ಮನೆಗೆ ನುಗ್ಗಿದ ಪೊಲೀಸರು ಆತನಿಗೆ ಹಾಗೂ ಕುಟುಂಬಸ್ಥರಿಗೆ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಕಾರಣಕ್ಕೆ ಅರ್ಜುನ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದೀಗ ಅರ್ಜುನ್ ಸಿಂಗ್ ಸಾವಿನ ಕೆಲ ದಿನಗಳ ನಂತರ ಕುಂಕುಮ್ ಸಿಂಗ್ ವಾಪಾಸ್ಸಾಗಿದ್ದು, ತಾನು ಮೋಹಿತ್ ಎಂಬಾತನೊಂದಿಗೆ ಸ್ವಯಂಪ್ರೇರಿತವಾಗಿ ಓಡಿಹೋಗಿ ಮದುವೆಯಾಗಿರುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾರೆ. ಹೀಗಾಗಿ, ಸುಳ್ಳು ದೂರು ನೀಡಿ ಒಬ್ಬಾತಮ ಸಾವಿಗೆ ಕಾರಣವಾದವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ದೂರು ನೀಡಿದ್ದ ಕುಂಕುಮ್ ಸಿಂಗ್ ತಂದೆಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಆತ್ಮಹತ್ಯೆ ಗೆ ಪ್ರೇರಣೆ ನೀಡಿದ ಆರೋಪ ಹೊರಿಸಲಾಗಿದೆ. ಮನೆಗೆ ಪೊಲೀಸರು ನುಗ್ಗಿ ಗಲಾಟೆ ಮಾಡಿದ ಆರೋಪಕ್ಕೆ ಸಂಬಂಧಿಸಿದ್ದ ಇಲಾಖೆ ತನಿಖೆ ನಡೆಸಲು ತೋರ್ಮಾನಿಸಿದ್ದು, ಪೊಲೀಸರು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.