ಬೆಂಗಳೂರು:ಕಮಿಷನ್ ರೂಪದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ಹೇಳಿ ವಿವಿಧ ಯುಪಿಐಗಳು ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಿದ್ದ ಅಂತರ ರಾಜ್ಯದ 12 ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹರ್ಷವರ್ಧನ್ (25), ಸೋನು(27), ಪ್ರಕಾಶ್ ಯಾದವ್(23), ಗೋರಖನಾಥ್(20), ಸಂಜಿತ್ ಕುಮಾರ್(25), ಆಕಾಶ್ ಕುಮಾರ್ ಸಿಂಗ್ (19), ಅಮಿತ್ ಯಾದವ್ (19), ಗೌರವ್ ಪ್ರತಾಪ್ ಸಿಂಗ್(22), ಬ್ರಿಜೇಶ್ ಸಿಂಗ್ (20), ರಾಜ್ ಮಿಶ್ರಾ(21), ತುಷಾರ್ ಮಿಶ್ರಾ(22), ಗೌತಮ್ ಶೈಲೇಶ್ (25) ಬಂಧಿತರು.
ಬಂಧಿತರು ಉತ್ತರ ಪ್ರದೇಶ ಹಾಗೂ ಬಿಹಾರದ ವಿವಿಧ ಪ್ರದೇಶಗಳ ನಿವಾಸಿಗಳು ಎಂದು ಗೊತ್ತಾಗಿದೆ.
ಠಾಣಾ ವ್ಯಾಪ್ತಿಯ ಎಲ್.ಆರ್. ನಗರದ ನಿವಾಸಿ ಸುಮಿಯಾ ಬಾನು ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ವಂಚನೆಗೊಳಗಾದ ಸುಮಿಯಾ ಬಾನು ಎಂಬುವರು ನೀಡಿದ ದೂರಿನನ್ವಯ ಹರ್ಷವರ್ಧನ್, ಸೋನು, ರಾಜಮಿಶ್ರಾ ಹಾಗೂ ಶೈಲೇಶ್ ಗೌತಮ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 400 ಸಿಮ್ ಕಾರ್ಡ್‍ಗಳು, 140 ಎಟಿಎಂ ಕಾರ್ಡ್‍ಗಳು, 17 ಚೆಕ್‍ಪುಸ್ತಕ, 27 ಮೊಬೈಲ್ ಫೋನ್, 22 ವಿವಿಧ ಬ್ಯಾಂಕ್ ಪಾಸ್‍ಬುಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಒಂದು ಬ್ಯಾಂಕ್ ಖಾತೆಗೆ 20 ಸಾವಿರ ಕಮಿಷನ್ ಪಡೆದು ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಿದ್ದರು. ಈ ಪ್ರಕರಣದ ಸಂಬಂಧ ತನಿಖೆಯಲ್ಲಿ ಕೆಲವರು ತಪ್ಪೊಪ್ಪಿಕೊಂಡಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಆಡುಗೋಡಿ ಠಾಣಾ ಪೊಲೀಸರು ತಿಳಿಸಿದ್ದಾರೆ.