ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ಸರಕಾರ ಮಣಿದಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ವಾಪಸ್ ಪಡೆಯಲು ತೀರ್ಮಾನಿಸಿದೆ. ಇಂದು ರೈತರೊಂದಿಗೆ ಸಭೆ ನಡೆಸಿದ ನಂತರ ಸಿಎಂ ಸಿದ್ದರಾಮಯ್ಯ ಈ ವಿಷಯವನ್ನು ಘೋಷಣೆ ಮಾಡಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ರೈತರು ಕೈಗಾರಿಕಾ ಪ್ರದೇಶಕ್ಕೆ ಫಲವತ್ತಾದ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಹೋರಾಟ ನಡೆಸುತ್ತಿದ್ದರು. ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸ್ವತಃ ಪ್ರಸ್ತುತ ಸಿಎಂ ಸಿದ್ದರಾಮಯ್ಯ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ, ರೈತರ ಪರ ನಿಲ್ಲುವ ಭರವಸೆ ಕೊಟ್ಟಿದ್ದರು. ಇದೀಗ ಅವರೇ ಸಿಎಂ ಆಗಿದ್ದರೂ ಭೂಸ್ವಾಧೀನ ನಡೆಯುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಆ ಭಾಗದ ರೈತರನ್ನು ಕರೆಸಿ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರು. ಆದರೆ, ರೈತರು ಮಣಿಯದೆ ಪಟ್ಟು ಹಿಡಿದಿದ್ದರು. ಹೀಗಾಗಿ, ಸರಕಾರ ಕೊನೆಗೂ ರೈತರ ಹೋರಾಟಕ್ಕಡ ಮಣಿದಿದ್ದು, ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ತೀರ್ಮಾನಿಸಿತು. ರೈತರು ಒಪ್ಪಿದರಷ್ಟೇ ಭೂಸ್ವಾಧೀನ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದೆ. ಹೀಗಾಗಿ, ರೈತರು ನಿರಾಳರಾಗಿದ್ದಾರೆ.