ದಟ್ಟಮಂಜಿನ ಪರಿಣಾಮ ದೆಹಲಿ- ಆಗ್ರಾ ಎಕ್ಸ್‌ಪ್ರೆಸ್ ಹೈವೆಯಲ್ಲಿ ಅಪಘಾತ;3 ಕಾರು, 7 ಬಸ್ ಗಳಿಗೆ ಬೆಂಕಿ: ನಾಲ್ವರು ಸಾವು
ನವದೆಹಲಿ: ದೆಹಲಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿರುವ ಪರಿಣಾಮ ದೆಹಲಿ- ಆಗ್ರಾ ಎಕ್ಸ್‌ಪ್ರೆಸ್ ಹೈವೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.
ಆಗ್ರಾ- ನೋಯ್ಡಾ ಲೇನ್ ನಲ್ಲಿರುವ 127 ನೇ ಮೈಲುಗಲ್ಲಿನ ಬಳಿ ನಡೆದ ಅಪಘಾತದಲ್ಲಿ ಮೊದಲಿಗೆ ಡಿಕ್ಕಿಯಾದ ಮೂರು ಕಾರುಗಳಿಗೆ ಬೆಂಕಿ ತಗುಲಿತು. ಪರಿಣಾಮ ಅದರಲ್ಲಿದ್ದ ನಾಲ್ವರು ಬೆಂಕಿಯಲ್ಲಿ ಸಜೀವವಾಗಿ ಸುಟ್ಟುಹೋಗಿದ್ದಾರೆ ಎನ್ನಲಾಗಿದೆ.
ಈ ಘಟನೆ ನಡೆಯುತ್ತಿರುವಾಗಲೇ ಹಿಂದಿನಿಂದ ಬಂದ ಏಳು ಬಸ್ ಗಳು ಕಾರುಗಳಿಗೆ ಡಿಕ್ಕಿ ಹೊಡೆದಿವೆ. ಒಂದು ಸಾಮಾನ್ಯ ಬಸ್ ಹಾಗೂ ಆರು ಸ್ಲೀಪರ್ ಕೋಚ್ ಬಸ್ ಗಳು ಡಿಕ್ಕಿ ಹೊಡೆದಿವೆ ಎನ್ನಲಾಗಿದೆ. ಘಟನೆಯ ಪರಿಣಾಮ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ವಾಹನ ಸವಾರರು ಪರಸಾಡುತ್ತಿದ್ದಾರೆ ಎಂದು ವರದಿಯಾಗಿದೆ.


