ರೈಲ್ವೇ ಟ್ರ್ಯಾಕ್ ಮೇಲೆ ಎಳೆದೊಯ್ದು ನವವಿವಾಹಿತೆ ಮೇಲೆ ಎಂಟು ಜನರಿಂದ ಸಾಮೂಹಿಕ ಅತ್ಯಾಚಾರ
ಕೊಲ್ಕತ್ತಾ: ಆಗಷ್ಟೇ ಮದುವೆಯಾಗಿದ್ದ 19 ವರ್ಷದ ಯುವತಿಯನ್ನು ಎಳೆದೊಯ್ದು ಎಂಟು ಜನರ ಗುಂಪು ಅತ್ಯಾಚಾರ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ಕಂಚ್ರಪಾರ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನವೆಂಬರ್ ನಾಲ್ಕರಂದು ಘಟನೆಗೆ ಸಂಬಂಧ ಮಹಜರು ನಡೆಸಲು ಪೊಲೀಸರು ಮತ್ತೇ ಆರೋಪಿಗಳನ್ನು ತಮ್ಮ ವಶಕ್ಕೆ ಕೇಳಿದ್ದಾರೆ.
ಯುವ ಜೋಡಿಯೊಂದು ಮನೆಯವರ ವಿರೋಧದ ನಡುವೆ ಮದುವೆಯಾಗಿತ್ತು. ಕುಟುಂಬದ ವಿರೋಧದ ನಂತರ ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಪ್ಲಾಟ್ ಫಾರ್ಮ್ ಟಿಕೆಟ್ ಇಲ್ಲದ ಕಾರಣಕ್ಕೆ ರೈಲ್ವೇ ಅಧಿಕಾರಿಗಳು ಅವರನ್ನು ನಿಲ್ದಾಣದಿಂದ ಹೊರಗೆ ಕಳುಹಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ರೈಲ್ವೇ ಹಳಿಯ ಮೇಲೆ ನಡೆಯುತ್ತಾ ಸಾಗಿದ್ದರು ಎನ್ನಲಾಗಿದೆ.
ಬೆಳಗ್ಗಿನ ಜಾವದವರೆಗೆ ರೈಲ್ವೇ ಹಳಿಯ ಮೇಲೆಯೇ ನಡೆದು ಹೋಗುತ್ತಿದ್ದ ಜೋಡಿಯು ಕಲ್ಯಾಣಿಯ ಬ್ಯಾರಕ್ ಪುರ ಎಕ್ಸ್ಪ್ರೆಸ್ ಹೈವೇಯ ಕಂಚ್ರಪಾರ ರೈಲ್ವೇ ನಿಲ್ದಾಣದ ಬಳಿಗೆ ಬಂದಾಗ ಸ್ಥಳೀಯ ಎಂಟು ಜನ ಯುವಕರು ಜೋಡಿಯನ್ನು ಹಿಂಬಾಲಿಸಿದ್ದಾರೆ. ನಂತರ ಯುವಕನಿಗೆ ಥಳಿಸಿ, ಯುವತಿಯನ್ನು ಪಕ್ಕದ ಪೊದೆಗೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ಬಂಧಿತ ಆರೋಪಿಗಳೆಲ್ಲರೂ ರೈಲ್ವೇ ನಿಲ್ದಾಣ ಸಮೀಪದ ದಿನಗೂಲಿ ನೌಕಕರಾಗಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ಪತಿ ಕಲ್ಯಾಣಿಯವರಾಗಿದ್ದು, ಅವರಿಬ್ಬರೂ ಯಾವುದೇ ಉದ್ಯೋಗವಿಲ್ಲದ ಜೋಡಿಯಾಗಿದ್ದು, ಪ್ರಸ್ತುತ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಆಕೆಯ ವೈದ್ಯಕೀಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಘಟನೆಯ ರಿಕ್ರಿಯೇಟ್ ಮಾಡುವ ಸಲುವಾಗಿ ಆರೋಪಿಗಳನ್ನು ಮತ್ತೇ ವಶಕ್ಕೆ ಪಡೆಯಲು ತೀರ್ಮಾನಿಸಿದ್ದಾರೆ.


