ಸುದ್ದಿ

ರಾಜ್ಯದ ಖಾಸಗಿ ಕಂಪನಿಗಳ ತುಪ್ಪ ಪರೀಕ್ಷಿಸಲು ರಾಜ್ಯಸರ್ಕಾರ ನಿರ್ಧಾರ

Share It

ಬೆಂಗಳೂರು: ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ವಿಚಾರ ದೇಶದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಈ ಹಿಂದೆ ಬಳಸಿರುವ ತುಪ್ಪ ಕಲಬೆರಕೆಯಿಂದ ಕೂಡಿತ್ತು ಎಂಬ ಆರೋಪ ಕೇಳಿಬಂದಿದೆ. ಇದರಿಂದ ಜಾಗೃತಗೊಂಡ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ತಯಾರಾಗುವ ವಿವಿಧ ಕಂಪನಿಯ ತುಪ್ಪವನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ.

ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟ ಮಾಡುತ್ತಿರುವ ವಿವಿಧ ಕಂಪನಿಗಳ ತುಪ್ಪಗಳನ್ನು ಪರೀಕ್ಷೆ ನಡೆಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯ ಆಹಾರ ಸುರಕ್ಷಿತ ಹಾಗೂ ಗುಣಮಟ್ಟ ಇಲಾಖೆಗೆ ಆದೇಶಿಸಿದ್ದಾರೆ.

ತ್ವರಿತಗತಿಯಲ್ಲಿ ವಿವಿಧ ಕಂಪನಿಗಳ ತುಪ್ಪದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ. ವರದಿ ಬಂದ ಬಳಿಕ ಇವುಗಳಲ್ಲಿ ಕಲಬೆರಕೆ ಕಂಡುಬಂದಲ್ಲಿ, ಕೂಡಲೇ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಸಚಿವರ ಆದೇಶ ಬೆನ್ನಲ್ಲೇ ವಿವಿಧ ಕಂಪನಿಗಳ ತುಪ್ಪದ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.

ಜೊತೆಗೆ ರಾಜ್ಯದ ದೇವಸ್ಥಾನಗಳಲ್ಲಿ ತುಪ್ಪದಿಂದ ತಯಾರಾಗುವ ಪ್ರಸಾದಗಳ ಮಾದರಿಯನ್ನೂ ಆಹಾರ ಇಲಾಖೆ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ತಯಾರಿ ನಡೆಸಿದೆ.

ಕೋಲಾರ ಹಾಲು ಒಕ್ಕೂಟದಿಂದ ಟಿಟಿಡಿಗೆ ಶೇ.30 ರಷ್ಟು ತುಪ್ಪ

ತಿರುಪತಿ ಲಡ್ಡುವಿಗೂ ಕೋಲಾರ ಹಾಲು ಒಕ್ಕೂಟಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ತಿರುಪತಿ ಲಡ್ಡುವಿನ ಸ್ವಾದದ ಹಿಂದೆ ಕೋಲಾರ ಹಾಲು ಒಕ್ಕೂಟದ ಶುದ್ಧ ತುಪ್ಪದ ಗಮಲಿದೆ ಅನ್ನೋ ವಿಷಯ ಈಗ ಟಿಟಿಡಿ ಅಧಿಕಾರಿಗಳಿಗೂ ಮನವರಿಕೆಯಾಗಿದೆ.

ಕಳೆದ ಹಲವು ವರ್ಷಗಳಿಂದ ಕೋಲಾರ ಹಾಲು ಒಕ್ಕೂಟದಲ್ಲಿ ತಯಾರಾಗುವ ತುಪ್ಪವನ್ನು ತಿರುಪತಿ ತಿರುಮಲ ಟ್ರಸ್ಟ್​​ಗೆ ಅಂದರೆ ತಿರುಪತಿ ದೇವಾಲಯದಲ್ಲಿ ಲಡ್ಡು ತಯಾರಿಕೆಗೆ ಕಳಿಸಲಾಗುತ್ತಿತ್ತು. ಪ್ರತಿ ತಿಂಗಳು ಟನ್​ಗಟ್ಟಲೆ ತುಪ್ಪ ಸರಬರಾಜಾಗುತ್ತಿತ್ತು. ಆದರೆ ಕಳೆದ 4 ವರ್ಷಗಳಿಂದ ತಿರುಪತಿ ದೇವಸ್ಥಾನಕ್ಕೆ ತುಪ್ಪದ ಪೂರೈಕೆ ನಿಲ್ಲಿಸಲಾಗಿತ್ತು.

ಆದರೆ, ಲಡ್ಡುವಿನಲ್ಲಿ ಮೊದಲಿನ ರುಚಿ ಇಲ್ಲ, ಜೊತೆಗೆ ಲಡ್ಡು ತಯಾರಿಕೆಗೆ ಬಳಸುವ ತುಪ್ಪ ಕಲಬೆರಕೆ ಅನ್ನೋದು ತಿಳಿಯುತ್ತಿದ್ದಂತೆ, ಎಚ್ಚೆತ್ತಿರುವ ಟಿಟಿಡಿ ಈಗ ಮತ್ತೆ ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ ನೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ತಿಂಗಳು 4 ಸಾವಿರ ಟನ್ ತುಪ್ಪ ಕಳಿಸುವಂತೆ ಒಪ್ಪಂದ ಮಾಡಿಕೊಂಡಿದೆ. ಅಂದರೆ ತಿರುಪತಿ ತಿರುಮಲದಲ್ಲಿ ಲಡ್ಡು ತಯಾರಿಕೆಗೆ ಕರ್ನಾಟಕದಿಂದ ಕಳಿಸುವ ತುಪ್ಪದ ಶೇ.30ರಷ್ಟು ತುಪ್ಪವನ್ನೂ ಕೋಲಾರ ಹಾಲು ಒಕ್ಕೂಟದಿಂದಲೇ ಕಳಿಸಲು ಸೂಚಿಸಲಾಗಿದೆ.


Share It

You cannot copy content of this page