ಬೆಂಗಳೂರು: ತಿರುಪತಿ ಲಡ್ಡು ತಯಾರಿಕೆಯಲ್ಲಿ ಕೊಬ್ಬು ಬೆರಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿರುವ ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ಅವರು, ದೇವಸ್ಥಾನಗಳ ಮೇಲಿನ ಲೌಖಿಕ ಕಾನೂನುಗಳೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ ಎಂದಿದ್ದಾರೆ.
ಹಿಂದೆ ಸ್ಥಳೀಯ ಭಕ್ತ ಸಮೂಹವೇ ದೇವಸ್ಥಾನದ ಹೊಣೆ ಹೊರುತಿತ್ತು. ಹೀಗಾಗಿ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಈಗ ಸರಕಾರಗಳು ಕೆಲವು ಕಾನೂನುಗಳನ್ನು ದೇವಸ್ಥಾನ, ಮಠಗಳ ಮೇಲೆ ಹೇರಿಕೆ ಮಾಡಿದೆ. ಹೀಗಾಗಿ, ರಾಜಕೀಯ ಮೇಲಾಟದಿಂದ ಭಕ್ತರ ಭಾವನೆಗಳಿಗೆ ಘಾಸಿಯಾಗುತ್ತದೆ ಎಂದಿದ್ದಾರೆ.
ಹಿಂದಿನಂತೆಯೇ ಭಕ್ತರ ಸಮೂಹಕ್ಕೆ ದೇವಸ್ಥಾನದ ಆಡಳಿತ ಕೊಡಬೇಕು. ಪ್ರಾಂತೀಯವಾಗಿಯೇ ನಿರ್ಣಯಗಳು ಜಾರಿಯಾಗಬೇಕು. ಆಗ ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಲಿದೆ ಎಂದು ಶ್ರೀಗಳು ಆಗ್ರಹಿಸಿದ್ದಾರೆ.
ದೇವಸ್ಥಾನ, ಮಠ ಮಾನ್ಯಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಹೊರಗಿಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೊಸ ಕಾಯಿದೆ ರೂಪಿಸಬೇಕು. ದೇವಸ್ಥಾನಗಳಲ್ಲಿ ಭಕ್ತರ ಭಾವನೆಗಳಿಗೆ ವಿರುದ್ಧವಾಗಿ ನಡೆಯುವ ಚಟುವಟಿಕೆಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
