ರಾಯಚೂರು: ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಬೆರೆಸಿದ್ದು, ಇಡೀ ಗ್ರಾಮಕ್ಕೆ ವಿಷ ಪೂರಿತ ನೀರಿನ ಸರಬರಾಜಾಗಿದೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ. ತಾಲೂಕಿನ ತವಗಾ ಗ್ರಾಮದಲ್ಲಿ ಇಡೀ ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಟ್ಯಾಂಕ್ ಗೆ ವಿಷಯುಕ್ತ ರಾಸಾಯನಿಕ ಮಿಶ್ರಣ ಮಾಡಲಾಗಿದೆ. ಅನಂತರ ನೀರು ಇಡೀ ಗ್ರಾಮಕ್ಕೆ ಸರಬರಾಜಾಗಿದೆ.
ಮನೆ ಮತ್ತು ಸಾರ್ವಜನಿಕ ನಲ್ಲಿಗಳ ಮೂಲಕ ಬಂದ ನೀರಿನಲ್ಲಿ ನೊರೆ ಕಾಣಿಸಿಕೊಂಡು ವಾಸನೆ ಬರಲು ಆರಂಭಿಸಿತ್ತು. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ವಾಟರ್ ಮ್ಯಾನ್ ಆದಪ್ಪ ಎಂಬಾತನನ್ನು ಪ್ರಶ್ನೆ ಮಾಡಿದ್ದಾರೆ.
ತಕ್ಷಣವೇ ಎಚ್ಚೆತ್ತುಕೊಂಡ ವಾಟರ್ ಮ್ಯಾನ್, ಇಡೀ ಗ್ರಾಮದ ನೀರು ಸರಬರಾಜು ನಿಲ್ಲಿಸಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಅನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನೀರಿನ ಮಾದರಿ ಸಂಗ್ರಹಿಸಿದ್ದಾರೆ.
ವಾಟರ್ ಮ್ಯಾನ್ ಆದಪ್ಪ ನೀಡಿದ ದೂರಿನ ಆಧಾರದಲ್ಲಿ ಹಟ್ಟಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ನೀರಿನಲ್ಲಿ ಮಿಶ್ರಿತ ವಾಗಿರುವ ರಾಸಾಯನಿಕ ಯಾವುದು? ಅದನ್ನು ಮಿಶ್ರಣ ಮಾಡಿದವರು ಯಾರು ಎಂಬ ಕುರಿತು ಶೋಧ ಆರಂಭಿಸಿದ್ದಾರೆ.