ಬೆಂಗಳೂರು: ಐದು ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ಸುಟ್ಟು ಹಾಕಲು ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬೆಂಗಳೂರು ನಗರ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಹಣ ಜಪ್ತಿ ಮಾಡಿದ್ದರು. ಇದರಲ್ಲಿ 500 ಮತ್ತು 1 ಸಾವಿರ ಮುಖ ಬೆಲೆ ಹೊಂದಿರುವ ಸುಮಾರು ಐದು ಕೋಟಿ ರು. ಸಂಗ್ರಹವಾಗಿತ್ತು. ಇದೀಗ ಈ ನೋಟುಗಳು ಮೌಲ್ಯ ಕಳೆದುಕೊಂಡಿದ್ದು, ಅಪಮೌಲ್ಯಗೊಂಡಿರುವ ನೋಟುಗಳನ್ನು ಸುಟ್ಟು ಹಾಕಲು ನ್ಯಾಯಾಲಯದ ಅನುಮತಿ ಕೇಳಲಾಗಿದೆ
ಹಳೆಯ ನೋಟುಗಳನ್ನು ಆರ್ ಬಿಐ ನಲ್ಲಿ ಕೊಟ್ಟು ಹೊಸ ನೋಟು ಪಡೆಯಲು ಅವಕಾಶವಿತ್ತು. ಆದರೆ, ಪ್ರಕರಣ ವಿಚಾರಣೆಯ ಹಂತದಲ್ಲಿದ್ದ ಕಾರಣ ಸೀಜ್ ಮಾಡಿದ್ದ ನೋಟುಗಳನ್ನು ತೆಗೆಯಲು ಸಾಧ್ಯವಾಗಿರಲಿಲ್ಲ. ಇದೀಗ ಆರ್ ಬಿಐ ಕೂಡ ನೋಟು ವಾಪಸ್ ಪಡೆಯಲು ನಿರಾಕರಿಸಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಐದು ಕೋಟಿ ಮೌಲ್ಯದ ನೋಟುಗಳನ್ನು ಸುಟ್ಟು ಹಾಕಲು ತೀರ್ಮಾನಿಸಿದ್ದಾರೆ. ಹೀಗಾಗಿ, ನ್ಯಾಯಾಲಯದ ಅನುಮತಿ ಕೋರಿದ್ದಾರೆ ಎಂದು ತಿಳಿದುಬಂದಿದೆ.