ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸೋದರ ಮುಮ್ತಾಜ್ ಅಲಿ ಅವರ ಮೃತದೇಹ ಪತ್ತೆಯಾಗಿದೆ.
ಸತತ 28 ಗಂಟೆಗಳ ಕಾರ್ಯಾಚರಣೆ ಬಳಿಕ ಮಂಗಳೂರಿನ ಕೂಳೂರಿನ ಸೇತುವೆ ಬಳಿ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ. ಮುಳುಗು ತಜ್ಞರು ಮೃತದೇಹವನ್ನು ಹೊರತೆಗೆದಿದ್ದು ಮೃತದೇಹ ಕಂಡು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಕಣ್ಣೀರು ಹಾಕಿದ್ದಾರೆ.
ಭಾನುವಾರ ಮಂಗಳೂರಿನ ಕುಳೂರಿನ ಸೇತುವೆ ಮೇಲೆ ಮುಮ್ತಾಜ್ ಅವರ KA19 MG0004 ಸಂಖ್ಯೆಯ BMW X5 ಕಾರು ಪತ್ತೆಯಾಗಿತ್ತು. ಈಜು ತಜ್ಞ ಈಶ್ವರ್ ಮಲ್ಪೆ ಅವರು ಮುಮ್ತಾಜ್ ಶೋಧ ಕಾರ್ಯಾಚರಣೆ ನಡೆಸಿದ್ದರು. ಫಲ್ಗುಣಿ ನದಿಯಲ್ಲಿ ಸ್ಕೂಬಾ ಡೈವ್ ಮಾಡಿ ಶೋಧ ನಡೆಸಿದ್ದರು.
ಮೃತ ಮುಮ್ತಾಜ್ ಅಲಿ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವ ಮತ್ತು ಮಾಜಿ ಎಂಲ್ಸಿ ಆಗಿರುವ ಬಿ.ಎಂ.ಫಾರೂಕ್ ಅವರ ತಮ್ಮ. ಇವರು ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದರು.
ಕೂಳೂರು ಸೇತುವೆ ಮೇಲೆ ತಮ್ಮ ಕಾರು ನಿಲ್ಲಿಸಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಹೀಗಾಗಿ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಕೋಸ್ಟ್ ಗಾರ್ಡ್, ಎಫ್,ಎಸ್ ಡಿಆರ್ ಎಫ್, ಅಗ್ನಿಶಾಮಕ ದಳ, ಈಶ್ವರ್ ಮಲ್ಪೆ ಸೇರಿದಂತೆ ಮುಳುಗು ತಜ್ಞರು ಶೋಧ ಕಾರ್ಯ ನಡೆಸಿದ್ದರು.