ಚಿತ್ರದುರ್ಗ: ಜಿಲ್ಲೆಯ ದಶಕಗಳ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಕೂಡಲೇ ಕೇಂದ್ರಸರ್ಕಾರದಿಂದ 5300 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ಎಂದು ಕೇಂದ್ರ ಜಲಶಕ್ತಿ ಸಹಾಯಕ ಸಚಿವ ವಿ. ಸೋಮಣ್ಣ ಅವರಿಗೆ ರೈತಸಂಘ ಮತ್ತು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಲಿಂಗಾರೆಡ್ಡಿ ಚಿತ್ರದುರ್ಗ ಜಿಲ್ಲೆಯು ದಶಕಗಳಿಂದ ಬರಪೀಡಿತ ಜಿಲ್ಲೆಯಾಗಿದೆ. ಸರಿಯಾಗಿ ಮಳೆಯಿಲ್ಲದೆ, ಯಾವುದೇ ನದಿ ಮೂಲಗಳಿಲ್ಲದ ಕಾರಣ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕೊಳವೆಬಾವಿಗಳೂ ಸಹ ಕ್ರಮೇಣ ಬತ್ತುತ್ತಿವೆ, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಏಕೈಕ ಆಶಾಕಿರಣವಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರಸರ್ಕಾರ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಬಿಡುಗಡೆ ಮಾಡಬೇಕಿದ್ದ 5300 ಕೋಟಿ ರೂಪಾಯಿ ಅನುದಾನ 3 ವರ್ಷಗಳಾದರೂ ಇನ್ನೂ ಬಿಡುಗಡೆಯಾಗಿಲ್ಲ, ಆದ್ದರಿಂದ ದಯವಿಟ್ಟು ಈಗಲಾದರೂ ತಮ್ಮ ಕೇಂದ್ರ ಜಲಶಕ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ 5300 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿ ಎಂದು ರೈತರ ಪರವಾಗಿ ಕೈಮುಗಿದು ಕೇಳುತ್ತಿದ್ದೇನೆ ಸಾರ್ ಎಂದು ಲಿಂಗಾರೆಡ್ಡಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಸೋಮಣ್ಣ ಜೊತೆಗೆ ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಉಪಸ್ಥಿತರಿದ್ದರು.