ಅಪರಾಧ ಸುದ್ದಿ

ನವಜಾತ ಶಿಶುವನ್ನು ಮಾರಾಟ ಮಾಡುತ್ತಿದ್ದ ವೈದ್ಯೆ ಸೇರಿ 6 ಮಂದಿಯ ಬಂಧನ

Share It

ದಾವಣಗೆರೆ: ನವಜಾತ ಶಿಶುವನ್ನು ಮಾರಾಟ ಮಾಡಿರುವ ವೈದ್ಯೆ ಸೇರಿ 6 ಮಂದಿ ಆರೋಪಿಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ನವಜಾತ ಶಿಶುವೊಂದನ್ನು ರೂ.4 ಲಕ್ಷಕ್ಕೆ ಮಾರಾಟ ಮಾಡಿದ ದಾವಣಗೆರೆಯ ಎಂ.ಕೆ.ಮೆಮೋರಿಯಲ್‌ ಆಸ್ಪತ್ರೆಯ ವೈದ್ಯೆ ಭಾರತಿ, ಶಿಶುವಿನ ತಾಯಿ ಕಾವ್ಯಾ, ಶಿಶು ಖರೀದಿಸಿದ್ದ ಜಯಾ ಹಾಗೂ ಪ್ರಶಾಂತ್‌ ಕುಮಾರ್‌ ದಂಪತಿ, ಮಧ್ಯವರ್ತಿಗಳಾದ ವಾದಿರಾಜ್‌, ಮಂಜಮ್ಮ ಅವರನ್ನು ಬಂಧಿಸಲಾಗಿದೆ.

ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಾರಾಟವಾಗಿದ್ದ ಎರಡೂವರೆ ತಿಂಗಳ ಗಂಡು ಶಿಶುವಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ಕಾವ್ಯಾ ಎಂಬುವರಿಗೆ ಸೇರಿದ ಮಗುವನ್ನು ಮಧ್ಯವರ್ತಿಗಳಾದ ವಾದಿರಾಜ್ ಮತ್ತು ಮಂಜಮ್ಮ ಎಂಬುವರ ಮೂಲಕ ಎಂಕೆ ಸ್ಮಾರಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ ಭಾರತಿ ಅವರು ಜಯ ಮತ್ತು ಪ್ರಶಾಂತ್ ಕುಮಾರ್ ಕುರುಡೇಕರ್ ಅವರಿಗೆ ಮಾರಾಟ ಮಾಡಿದ್ದಾರೆಂದು ಮಾಹಿತಿ ನೀಡಿದ್ದರು.

ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಟಿ.ಎನ್.ಕವಿತಾ ಮತ್ತು ತಂಡ ವಿನೋಭ ನಗರದಲ್ಲಿರುವ ಜಯ ಮತ್ತು ಪ್ರಶಾಂತ್ ಅವರ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ಜನನ ಪ್ರಮಾಣಪತ್ರ ಸೇರಿ ಹಲವು ನಕಲಿ ಪ್ರಮಾಣಪತ್ರಗಳನ್ನು ವಶಕ್ಕೆ ಪಡೆದರು.

ಜಯಾ ಹಾಗೂ ಪ್ರಶಾಂತ್‌ ದಂಪತಿಗೆ ಆ.26ರಂದು ಶಿಶು ಜನನವಾಗಿದೆ ಎಂಬುದಾಗಿ ದಾಖಲೆ ಸೃಷ್ಟಿಸಿದ್ದರು. ದಾಖಲೆಗಳನ್ನು ಆಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ ತಂಡ ಪರಿಶೀಲನೆ ನಡೆಸಿದಾಗ ಮಕ್ಕಳ ಮಾರಾಟ ವಿಚಾರ ಖಚಿತವಾಗಿದೆ.

ಮದುವೆಯಾಗಿ ಗಂಡನಿಂದ ವಿಚ್ಛೇದನ ಪಡೆದಿದ್ದ ಕಾವ್ಯಾ ಅವರು ಕೆಲ ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗು ಮಾರಾಟ ಮಾಡಲು ನಿರ್ಧರಿಸಿದ್ದರು. ಮದುವೆಯಾಗಿ 7 ವರ್ಷಗಳು ಕಳೆದರೂ ಜಯಾ ಹಾಗೂ ಪ್ರಶಾಂತ್ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ಮಧ್ಯವರ್ತಿ ವಾದಿರಾಜ್ ಮೂಲಕ ಮಗುವನ್ನು 4ಲಕ್ಷಕ್ಕೆ ಪಡೆದಿದ್ದರು.

ಆರೋಪಿಗಳ ವಿರುದ್ಧ ಬಾಲ ನ್ಯಾಯ ಕಾಯ್ದೆ 2015, ಮಕ್ಕಳ ರಕ್ಷಣಾ ಕಾಯ್ದೆ 2004 ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ತಿಳಿಸಿದ್ದಾರೆ.


Share It

You cannot copy content of this page