ಬೆಂಗಳೂರು: ಮೂಡಾ ಬೆನ್ನುಬಿದ್ದು ಸಿಎಂ ರಾಜೀನಾಮೆಗೆ ಒತ್ತಾಯ ಮಾಡುತ್ತಿರುವ ಬಿಜೆಪಿಗೆ ಕರೋನಾ ಭಯ ಆವರಿಸಿದೆ.
ಕರೋನಾ ಕಾಲದ ಹಗರಣದ ತನಿಖೆಗೆ ಸರಕಾರ ಸಚಿಚ ಸಂಪುಟದಲ್ಲಿ ತೀರ್ಮಾನ ಕೈಗೊಂಡಿರುವುದು ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದ ಬಿಜೆಪಿ ನಾಯಕರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಕರೋನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರ ತನಿಖೆ ನಡೆಸಲು ಜಸ್ಟಿಸ್ ಕುನ್ಹಾ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಮಧ್ಯಂತರ ವರದಿ ನೀಡಿದ್ದು, ಸಂಪೂರ್ಣ ವರದಿ ಸರಕಾರದ ಕೈ ಸೇರಬೇಕಿದೆ.
ಈ ವೇಳೆ ಬಿಜೆಪಿ ಮೂಡಾ ಹಗರಣದಲ್ಲಿ ಸಿಎಂ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದು, ಇದನ್ನು ಸಡಿಲಗೊಳಿಸಲು ಕರೋನಾಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಕುನ್ಹಾ ವರದಿಯ ಜಾರಿಗೆ ಸಂಪುಟ ಉಪಸಮಿತಿ ರಚನೆ ಮಾಡಲು ಸರಕಾರ ತೀರ್ಮಾನಿಸಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಕರೋನಾ ಹಗರಣದ ಕುರಿತು ಬಿಜೆಪಿಗೆ ಟಕ್ಕರ್ ಕೊಡಲು ಸರಕಾರ ತೀರ್ಮಾನಿಸಿದೆ. ಕೋವಿಡ್ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಹಣಿಯಲು ಇದೊಂದು ಮಾರ್ಗ ಎಂದು ತೀರ್ಮಾನಿಸಿ, ಉಪಸಮಿತಿ ರಚನೆಗೆ ಒಪ್ಪಿಗೆ ನೀಡಲಾಗಿದೆ.