ಉಪಯುಕ್ತ ರಾಜಕೀಯ ಸುದ್ದಿ

ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಬೆಳಗಾವಿಗೆ ವಿಸ್ತರಣೆ

Share It

ಬೆಳಗಾವಿ: ಬೆಳಗಾವಿ ಜನತೆಯ ಬೇಡಿಕೆಯಂತೆ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೂ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಧಾರವಾಡ- ಬೆಂಗಳೂರು ವಂದೇ ಭಾರತ್ ಸೇವೆಯನ್ನು ಬೆಳಗಾವಿವರೆಗೂ ವಿಸ್ತರಿಸಬೇಕೆನ್ನುವುದು ಇಲ್ಲಿನ ಜನತೆ ಹಾಗೂ ಜನಪ್ರತಿನಿಧಿಗಳ ಒತ್ತಾಯವಾಗಿದೆ. ಬೆಂಗಳೂರು-ಧಾರವಾಡ ನಡುವೆ ಸದ್ಯ ಸಂಚರಿಸುವ ಈ ವಂದೇ ಭಾರತ್ ರೈಲನ್ನು ಬೆಳಗಾವಿಗೆ ವಿಸ್ತರಿಸಲು ರೈಲ್ವೆ ಅಧಿಕಾರಿಗಳು ನೀಡಿರುವ ತಾಂತ್ರಿಕ ಕಾರಣ ನನಗೆ ಗೊತ್ತಿಲ್ಲ. ಆ ಸಂದರ್ಭದಲ್ಲಿ ನಾನು ಸಚಿವನಾಗಿರಲಿಲ್ಲ. ಆದರೆ, ಹಳೆಯದನ್ನು ಕೆದಕಿ ಕೆಲಸ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಆರಂಭ ಮಾಡುವ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಸೇರಿದಂತೆ ಇತರ ಜನಪ್ರತಿನಿಧಿಗಳ ಜೊತೆಗೆ ಚರ್ಚೆ ನಡೆಸಲಾಗಿದೆ ಎಂದರು.

ಈ ನಿಟ್ಟಿನಲ್ಲಿ ಬೆಳಗಾವಿವರೆಗೂ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲನ್ನು ವಿಸ್ತರಿಸಲು ಕ್ರಮ ವಹಿಸಲಾಗುತ್ತದೆ. ಬೆಳಗಾವಿ- ಕಿತ್ತೂರು-ಧಾರವಾಡ ನೇರ ರೈಲ್ವೆಗೆ ಅಡ್ಡಿಯಾಗಿದ್ದ ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆ ಇಷ್ಟರಲ್ಲೇ ಬಗೆಹರಿಯಲಿದೆ. ಭೂ ಸ್ವಾಧೀನ ಪ್ರಕ್ರಿಯೆ ನಿವಾರಣೆಯಾಗುವ ಹಂತಕ್ಕೆ ತಲುಪಿದೆ ಎಂದು ಹೇಳಿದರು.

ಪುಣೆ-ಹುಬ್ಬಳ್ಳಿ ಮತ್ತು ಪುಣೆ- ಕೊಲ್ಲಾಪುರ ನಡುವೆ ವಂದೇ ಭಾರತ್ ರೈಲು ಸೋಮವಾರ ಆರಂಭವಾಗಲಿದೆ. ಇಂದು ಸಂಜೆ ಕೊಲ್ಲಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ನಾನು ಭಾಗವಹಿಸಿ ರಾತ್ರಿ ಬೆಳಗಾವಿಯಲ್ಲೂ ವಂದೇ ಭಾರತ ರೈಲನ್ನು ಸ್ವಾಗತ ಕೋರಲಾಗುವುದು ಎಂದು ಅವರು ತಿಳಿಸಿದರು.

ಬೆಳಗಾವಿ-ಮುಂಬೈ ನಡುವೆ ರಾತ್ರಿ ವೇಳೆ ರೈಲು ಆರಂಭಿಸುವ ಬೇಡಿಕೆ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದಲ್ಲಿ ಶೇಕಡ 100ರಷ್ಟು ಪ್ರಮಾಣದಲ್ಲಿ ರೈಲ್ವೆ ಸೌಲಭ್ಯ ಸುಧಾರಣೆ ಕಂಡಿದೆ. ಹೆಚ್ಚಿನ ಜನ ರೈಲ್ವೆ ಸೌಲಭ್ಯ ಪಡೆಯುತ್ತಿದ್ದು ವಂದೇ ಭಾರತ್ ರೈಲುಗಳು ವೇಗ ಪಡೆದುಕೊಂಡಿವೆ. ಸೋಮವಾರ ಏಳು ರೈಲುಗಳಿಗೆ ಚಾಲನೆ ಸಿಕ್ಕಿದೆ ಎಂದು ಅವರು ಹೇಳಿದರು.


Share It

You cannot copy content of this page