ಬೆಂಗಳೂರು: ಜಿಎಸ್ ಟಿ ಸಭೆಗೆ ಹೋಗುವ ರಾಜ್ಯದ ಪ್ರತಿನಿಧಿ ಕಡ್ಲೇ ಕಾಯಿ ತಿನ್ನುತಿರುತ್ತಾರಾ? ಎಂಬ ಆರ್. ಅಶೋಕ್ ಅವರ ಪ್ರಶ್ನೆಗೆ ಸಚಿವ ಕೃಷ್ಣ ಬೈರೇಗೌಡ ಕೆಂಡಾಮಂಡಲವಾಗಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ ಅವರ ಇತ್ತೀಚಿನ ಪತ್ರಿಕಾ ಹೇಳಿಕೆ ಓದಿ ನಿಜಕ್ಕೂ ಆಘಾತವಾಯಿತು. ಜವಾಬ್ದಾರಿಯುತ ಸ್ಥಾನದಲ್ಲಿರುವ, ಹಿಂದೆ ಕಂದಾಯ ಇಲಾಖೆ ಸಚಿವರಾಗಿದ್ದವರಿಗೆ ಜಿಎಸ್ಟಿ ಕಮಿಟಿ ಹಾಗೂ ಹಣಕಾಸು ಆಯೋಗದ ನಡುವಿನ ವ್ಯತ್ಯಾಸ ತಿಳಿಯದಿರುವುದು ಅಚ್ಚರಿ ವಿಚಾರ. ಸಿಎಂ ಸಿದ್ದರಾಮಯ್ಯನವರನ್ನು ಟೀಕಿಸುವ ಬರದಲ್ಲಿ ನನ್ನ ವಿರುದ್ಧವೂ ಕೀಳುಮಟ್ಟದ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕುದಾದ ನಡೆ ಅಲ್ಲ ಎಂದರು.
ಆರ್. ಅಶೋಕ್ ಅವರೇ ಜಿಎಸ್ಟಿ ಕಮಿಟಿ ಹಾಗೂ ಹಣಕಾಸು ಆಯೋಗ ಬೇರೆ ಬೇರೆ ಎಂಬ ಕುರಿತು ಕಡಲೆಕಾಯಿ ಬೆಳೆಯುವ ನಮ್ಮ ನಾಡಿನ ಸಾಮಾನ್ಯ ರೈತನಿಗೆ ಇರುವಷ್ಟೂ ಕನಿಷ್ಠ ಜ್ಞಾನ ವಿಪಕ್ಷ ನಾಯಕನಾದ ತಮಗೆ ಇಲ್ಲದಿರುವುದು ಈ ನಾಡಿನ ದೌರ್ಭಾಗ್ಯ. ಮೊದಲು ತಾವು ಜಿಎಸ್ಟಿ ಎಂದರೆ ಏನು? ಸಭೆಯಲ್ಲಿ ಚರ್ಚೆಯಾಗುವ ವಿಚಾರಗಳೇನು ಎಂಬ ಕುರಿತು ತಿಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇನ್ನೂ ಜಿಎಸ್ಟಿ ಸಭೆಯಲ್ಲಿ ಯಾವ ಸರಕು ಅಥವಾ ಸೇವಾ ವಿಚಾರಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು, ಅದರ ಮೇಲಿನ ತೆರಿಗೆ ಮೌಲ್ಯ ಯಾವ ಪ್ರಮಾಣದಲ್ಲಿರಬೇಕು? ಎಂದು ಚರ್ಚಿಸಲಾಗುತ್ತೆಯೇ ವಿನಃ ಆ ಸಭೆಯಲ್ಲಿ ಎದ್ದು ನಿಂತು ನಮಗೆ ತೆರಿಗೆ ಪಾಲಿನಲ್ಲಿ ಮೋಸವಾಗುತ್ತಿದೆ, ಹೀಗಾಗಿ ನಮ್ಮ ಪಾಲನ್ನು ಹೆಚ್ಚಿಸಿ ಎಂದು ಹಕ್ಕೊತ್ತಾಯ ಮಾಡಲಾಗದು? ಹಣಕಾಸು ಆಯೋಗವು ಏನು ಮಾಡುತ್ತದೆ ಎಂಬುದನ್ನೂ ಅರಿಯಿರಿ ಅಶೋಕ್ ಅವರೇ ಎಂದು ಗುಡುಗಿದ್ದಾರೆ.