ರಾಜಕೀಯ ಸುದ್ದಿ

ಅ.17ಕ್ಕೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಪದಗ್ರಹಣ ಕಾರ್ಯಕ್ರಮ

Share It

ಬೆಂಗಳೂರು: ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕವಾಗಿರುವ ಸೌಮ್ಯಾ ರೆಡ್ಡಿ ಅವರು, ಅಕ್ಟೋಬರ್ 17 ರಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಿಕಟಪೂರ್ವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್, ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ.

ಸೌಮ್ಯಾ ರೆಡ್ಡಿ ಅವರು, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ ತನ್ನ ಮಹಿಳಾಪರ ಕಾರ್ಯಗಳ ಮೂಲಕ ರಾಜ್ಯದ ಗಮನಸೆಳೆದಿದ್ದರು. ಈ ನಡುವೆ ಕೇವಲ 16 ಮತಗಳ ಅಂತರದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ತೇಜಸ್ವಿ ಸೂರ್ಯ ವಿರುದ್ಧ ಸೋಲು ಕಂಡಿದ್ದರು. ಪಕ್ಷದ ಸಂಘಟನೆ ಮತ್ತು ಹೋರಾಟವನ್ನು ಗುರುತಿಸಿ, ಹೈಕಮಾಂಡ್ ಸೌಮ್ಯಾ ರೆಡ್ಡಿ ಅವರನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸಿದೆ.

ಮಹಿಳಾ ಸಂಘಟನೆಯಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಸೌಮ್ಯಾ ರೆಡ್ಡಿ ಅವರಿಂದ ರಾಜ್ಯ ಮಹಿಳಾ ಕಾಂಗ್ರೆಸ್ ಸಂಘಟನೆಗೆ ಬಹುದೊಡ್ಡ ಪ್ರಯೋಜನವಾಗಲಿದೆ. ಅವರ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಘಟಕ ಮತ್ತಷ್ಡು ಗಟ್ಟಿಗೊಳ್ಳಲಿದೆ ಎಂಬುದು ಬಹುತೇಕ ಕಾಂಗ್ರೆಸ್ ನಾಯಕರ ಅಭಿಮತ.

ಈ ನಿಟ್ಟಿನಲ್ಲಿ ಸೌಮ್ಯಾ ರೆಡ್ಡಿ ಅವರು, ಅಕ್ಟೋಬರ್17 ರ ಗುರುವಾರ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


Share It

You cannot copy content of this page