ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್: ಚಾರ್ಜ್ ಶೀಟ್ ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ!

Share It

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕುರಿತಂತೆ ಪೊಲೀಸರು ಸುದೀರ್ಘವಾದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆರೋಪ ಪಟ್ಟಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ ಆರೋಪಿಗಳ ಪರ ವಕೀಲರ ಅವಗಾಹನೆಗೆ ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಕುರಿತಾದ ಹಲವು ಆಘಾತಕಾರಿ ವಿಷಯಗಳನ್ನು ಆರೋಪ ಪಟ್ಟಿ ಒಳಗೊಂಡಿದೆ. ಆರೋಪಿಗಳು ಪೊಲೀಸರ ಮುಂದೆ ದಾಖಲಿಸಿರುವ ಸ್ವಇಚ್ಛಾ ಹೇಳಿಕೆಯನ್ನು ಸಹ ಆರೋಪ ಪಟ್ಟಿ ಒಳಗೊಂಡಿದೆ. ಚಾರ್ಜ್ ಶೀಟ್ ನಲ್ಲಿ ಇಬ್ಬರು ಕನ್ನಡ ನಟಿಯರ ಹೆಸರಿನ ಉಲ್ಲೇಖವೂ ಇದೆ!

ಪ್ರಕರಣದ 14ನೇ ಆರೋಪಿ ಆಗಿರುವ ಪ್ರದೋಶ್ ದಾಖಲಿಸಿರುವ ಸ್ವಇಚ್ಛಾ ಹೇಳಿಕೆ ಪ್ರಕಾರ, ರೇಣುಕಾಸ್ವಾಮಿ ತನ್ನ ನಕಲಿ ಇನ್​ಸ್ಟಾಗ್ರಾಂ ಖಾತೆಯಿಂದ ಕನ್ನಡದ ಇನ್ನಿಬ್ಬರು ನಟಿಯರಿಗೆ ಸಂದೇಶ ಕಳಿಸಿದ್ದನಂತೆ.

ರೇಣುಕಾಸ್ವಾಮಿಯನ್ನು ಶೆಡ್​ಗೆ ಕರೆತಂದು ಹಲ್ಲೆ ಮಾಡುವ ಸಂದರ್ಭದಲ್ಲಿ 14ನೇ ಆರೋಪಿ ಪ್ರದೋಶ್ ರೇಣುಕಾಸ್ವಾಮಿಯ ಮೊಬೈಲ್ ತೆಗೆದುಕೊಂಡು ಅದರಲ್ಲಿ ಆತ ಮಾಡಿರುವ ಸಂದೇಶಗಳನ್ನು ಪರಿಶೀಲನೆ ಮಾಡಿದ್ದನಂತೆ.

ಆಗ ರೇಣುಕಾಸ್ವಾಮಿ, ತಾನು ಬಳಸುತ್ತಿದ್ದ ಗೌತಮ್ ಕೆ.ಎಸ್ ಹೆಸರಿನ ನಕಲಿ ಖಾತೆಯಿಂದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭ ಪೂಂಜಾ ಅವರಿಗೂ ಸಹ ಅಶ್ಲೀಲ ಸಂದೇಶ ಕಳಿಸಿದ್ದ ಎಂದು ಪ್ರದೋಶ್, ದರ್ಶನ್​ಗೆ ತಿಳಿಸಿದನಂತೆ. ಹೀಗೆಂದು ಪ್ರದೋಶ್ ತನ್ನ ಸ್ವಇಚ್ಛಾ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ರಾಗಿಣಿ ದ್ವಿವೇದಿ, ‘ನನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ಏಜೆನ್ಸಿಯವರು ಹ್ಯಾಂಡಲ್ ಮಾಡುತ್ತಾರೆ. ಹಾಗಾಗಿ ನನಗೆ ಯಾರು ಸಂದೇಶ ಕಳಿಸಿದ್ದಾರೆ, ಇಲ್ಲ ಎಂಬ ವಿಷಯ ನನಗೆ ತಿಳಿದುಬಂದಿಲ್ಲ‘ ಎಂದಿದ್ದಾರೆ.

ಇನ್ನು ನಟಿ ಶುಭಾ ಪೂಂಜಾ ಸಹ ಪ್ರತಿಕ್ರಿಯೆ ನೀಡಿದ್ದು, ‘ನನಗೆ ಗೌತಮ್ ಅನ್ನುವ ಹೆಸರಿನಲ್ಲಿ ಯಾವುದೇ ರೀತಿಯ ಮೇಸೆಜ್ ಬಂದಿಲ್ಲ, ಸುಖಾಸುಮ್ಮನೆ ನನ್ನ ಹೆಸರು ಯಾಕೆ ಪ್ರದೋಶ್ ಹೇಳಿದ್ದಾರೆ ನನಗೆ ಗೊತ್ತಿಲ್ಲ’ ಎಂದು ಶುಭಾ ಪೂಂಜಾ ಹೇಳಿದ್ದಾರೆ.

ಅಸಲಿಗೆ ರೇಣುಕಾಸ್ವಾಮಿ ಕೊಲೆ ನಡೆದು ಪ್ರಕರಣ ಹೊರಬಿದ್ದಾದ ಬಳಿಕ ಕೆಲವು ನಟಿಯರು ತಮಗೆ ‘ಗೌತಮ್’ ಹೆಸರಿನ ಖಾತೆಯಿಂದ ಇನ್ ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಬಂದಿದ್ದಾಗಿ ಹೇಳಿಕೊಂಡಿದ್ದರು. ತಾವು ಆ ಖಾತೆಯನ್ನು ಬ್ಲಾಕ್ ಮಾಡಿದ್ದಾಗಿಯೂ ಹೇಳಿಕೊಂಡಿದ್ದರು.

ರೇಣುಕಾಸ್ವಾಮಿ ತನ್ನ ನಕಲಿ ಖಾತೆಯಿಂದ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ, ಅದೇ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬೆಂಗಳೂರಿಗೆ ಕರೆತಂದು ದರ್ಶನ್ ಹಾಗೂ ಇತರರು ಸೇರಿ ಚೆನ್ನಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ 17 ಆರೋಪಿಗಳನ್ನು ಬಂಧಿಸಲಾಗಿದೆ.


Share It

You cannot copy content of this page