ಮೈಸೂರು: ಗಲಭೆ ಪೀಡಿತ ನಾಗಮಂಗಲಕ್ಕೆ ಬಿಜೆಪಿಯ ಸತ್ಯಶೋಧನಾ ಸಮಿತಿ ಸದಸ್ಯರು ಭೇಟಿ ನೀಡಿದರು.
ತಂಡವು ಹಿಂಸಾಚಾರದಲ್ಲಿ ಸುಟ್ಟುಹೋದ ಅಂಗಡಿಗಳನ್ನು ಪರಿಶೀಲಿಸಿತು, ಹಾನಿಗೊಳಗಾದ ಪ್ರದೇಶಗಳು ಮತ್ತು ಬಂಧಿತರ ಕುಟುಂಬಗಳನ್ನು ಭೇಟಿ ಮಾಡಿತು.
ಶಾಸಕ ಅಶ್ವತ್ಥ್ ನಾರಾಯಣ್ ಮಾತನಾಡಿ, ನಾಗಮಂಗಲದಲ್ಲಿ ನಡೆದ ಗಲಭೆ ಬಗ್ಗೆ ಸಮಗ್ರ ತನಿಖೆ ಆಗಬೇಕು. ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು ಎಂದು ಆಗ್ರಹಿಸಿದರು.
ನಾಗಮಂಗಲದ ಘಟನೆ ಹಿಂದಿರುವ ಕಾಣದ ಕೈಗಳ ಪತ್ತೆ ಮಾಡಬೇಕು. ಇದನ್ನು ತಿಳಿಯಲು ಸತ್ಯಶೋಧನಾ ಸಮಿತಿ ರಚನೆ ಮಾಡಿಕೊಂಡಿದ್ದೇವೆ. ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಕೇರಳದ ಇಬ್ಬರು ನಾಗಮಂಗಲ ಗಲಭೆಯಲ್ಲಿ ಶಾಮೀಲಾಗಿದ್ದಾರೆ. ಗಲಾಟೆಯಿಂದ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸತ್ಯಶೋಧನಾ ಸಮಿತಿ ತನ್ನ ವರದಿಯನ್ನು ಪಕ್ಷದ ನಾಯಕತ್ವ ಮತ್ತು ಸರ್ಕಾರಕ್ಕೆ ಸಲ್ಲಿಸಲಿದ್ದು, ವರದಿಯು ಈ ಪ್ರದೇಶದಲ್ಲಿ ಪೊಲೀಸ್ ವೈಫಲ್ಯ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಎತ್ತಿ ತೋರಿಸುತ್ತದೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಮುಖಂಡ ಸುಬ್ಬಾರೆಡ್ಡಿ, ವಕೀಲರೊಂದಿಗೆ ನಾಗಮಂಗಲ ಪಟ್ಟಣಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಗಲಭೆಯ ಹಿಂದೆ ಪಿಎಫ್‌ಐ ಕೈವಾಡವಿದೆ ಎಂದು ಆರೋಪಿಸಿದರು.
ಸಮಿತಿ ನೇತೃತ್ವ ವಹಿಸಿರುವ ಶಾಸಕ ಡಾ. ಸಿಎನ್ ಅಶ್ವತ್ಥನಾರಾಯಣ್ ಅವರು, ಪಕ್ಷದ ಮುಖಂಡರಾದ ಭೈರತಿ ಬಸವರಾಜ್, ಭಾಸ್ಕರ್ ರಾವ್, ನಾರಾಯಣ್ ಗೌಡ ಮತ್ತು ಲಕ್ಷ್ಮಿ ಅಶ್ವಿನ್ ಗೌಡ ಅವರೊಂದಿಗೆ ಪಟ್ಟಣಕ್ಕೆ ಭೇಟಿ ನೀಡಿದರು.

