ರಾಜಕೀಯ ಸುದ್ದಿ

ಒಕ್ಕಲಿಗ ಸಮುದಾಯಕ್ಕೆ ಅಪಮಾನ; ಸಮುದಾಯದ ನಾಯಕರು, ಸ್ವಾಮೀಜಿಗಳು ಮಾತಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

Share It

ಬೆಂಗಳೂರು:

“ಒಕ್ಕಲಿಗ ಸಮುದಾಯದ ಕುರಿತು ಮುನಿರತ್ನ ಅವರು ಆಡಿರುವ ಮಾತಿನ ಬಗ್ಗೆ ಸಮುದಾಯದ ಮುಖ್ಯಸ್ಥರು, ಸ್ವಾಮೀಜಿಗಳು, ಹಿರಿಯರು, ನಾಗರೀಕರು ಮಾತನಾಡಬೇಕು. ಅದರ ಬಗ್ಗೆ ಅಶೋಕ್ ಹಾಗೂ ಬಿಜೆಪಿ ನಾಯಕರು ಮಾತನಾಡಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಅಮೇರಿಕ ಪ್ರವಾಸದಿಂದ ಮರಳಿದ ನಂತರ ಮಂಗಳವಾರ ಮುಂಜಾನೆ ಸದಾಶಿವನಗರದ ನಿವಾಸದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಶಾಸಕ ಮುನಿರತ್ನ ಅವರು ದಲಿತರು ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ಮಾಡಿರುವ ಅವಹೇಳನದ ಬಗ್ಗೆ ಕೇಳಿದಾಗ, “ದೊಡ್ಡ ದೊಡ್ಡ ನಾಯಕರಿದ್ದಾರೆ, ಅವರು ಮಾತಾಡಬೇಕು. ಇಂತಹ ವಿಚಾರದಲ್ಲಿ ಬಿಜೆಪಿಯವರೇ ಪ್ರತಿಕ್ರಿಯೆ ನೀಡಬೇಕು. ಮುನಿರತ್ನ ಮಾತನಾಡಿರುವುದು ಸರಿಯೋ ತಪ್ಪೋ? ಒಳ್ಳೆಯದೋ, ಕೆಟ್ಟದ್ದೋ ಎಂಬುದನ್ನು ತಿಳಿಸಬೇಕು. ಸರಿಯಿದ್ದರೆ ಸರಿ, ತಪ್ಪಿದ್ದರೆ ತಪ್ಪು ಎಂದು ಹೇಳಬೇಕು” ಎಂದರು.

ಪೊಲೀಸರ ಬಂಧನಕ್ಕೆ ಮುಂಚಿತವಾಗಿ ನನ್ನ ವಿಚಾರದಲ್ಲಿ ಅಣ್ಣ- ತಮ್ಮರ ಆಟ ಶುರುವಾಗಿದೆ ಎನ್ನುವ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರ ಗೊತ್ತೇ ಇಲ್ಲ, ತಿಳಿದು ಮಾತಾಡ್ತೀನಿ. ನನಗೆ ಇನ್ನು ಸರಿಯಾಗಿ ಮಾಹಿತಿ ಗೊತ್ತಿಲ್ಲ. ಸಾಂವಿಧಾನಿಕ ಹುದ್ದೆ ಹೊಂದಿರುವ ಆರ್ ಅಶೋಕ್, ವಿಜಯೇಂದ್ರ, ಕೇಂದ್ರ ಸಚಿವರು ಇದ್ದಾರೆ. ಅವರು ದೊಡ್ಡ ನಾಯಕರಿದ್ದಾರೆ. ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು” ಎಂದರು.

ರಾಹುಲ್ ಗಾಂಧಿ ಅವರ ಭೇಟಿಗೆ ಯಾರ ಅನುಮತಿ ಬೇಕು?

ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರ ಭೇಟಿ ಹಾಗೂ ಚರ್ಚೆಯ ವಿಚಾರದ ಬಗ್ಗೆ ಕೇಳಿದಾಗ, “ನಮ್ಮ ಪಕ್ಷದ ನಾಯಕರನ್ನು ಭೇಟಿಯಾಗಲು ಯಾರ ಅನುಮತಿ ಕೇಳಬೇಕು? ರಾಹುಲ್ ಗಾಂಧಿ ಅವರ ಬಳಿ ಏನು ಮಾತನಾಡಿದೆ ಎಂದು ನಿಮಗೆ (ಮಾಧ್ಯಮದವರಿಗೆ) ಹೇಳಲಾಗುತ್ತದೆಯೇ? ನನ್ನ ತಮ್ಮ, ಹೆಂಡತಿ ಮತ್ತು ಸ್ವಾಮೀಜಿಯವರ ಬಳಿ ಏನು ಮಾತನಾಡುತ್ತೇನೆ ಎಂಬುದನ್ನು ನಿಮ್ಮ ಬಳಿ ಹೇಳಲು ಆಗುತ್ತದೆಯೇ?” ಎಂದರು.

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, “ಸರ್ಕಾರ, ಪೊಲೀಸ್ ಇಲಾಖೆಯು ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೊ ಅದನ್ನು ಮಾಡುತ್ತದೆ” ಎಂದರು.


Share It

You cannot copy content of this page