ಉಪಯುಕ್ತ ಸುದ್ದಿ

ಟಿ.ಬಿ‌ ಡ್ಯಾಂ ದುರಸ್ತಿ ಸಂಪೂರ್ಣ ಮುಕ್ತಾಯ: ಹನಿ ನೀರು ವ್ಯರ್ಥವಾಗದಂತೆ ತಡೆಯಲು ಸಿಬ್ಬಂದಿ ಯಶಸ್ವಿ

Share It

ಹೊಸಪೇಟೆ : ಆಗಸ್ಟ್ 10ರಂದು ಸಂಪೂರ್ಣ ಭರ್ತಿಯಾಗಿದ್ದ ತುಂಗಾಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ 19 ಕಿತ್ತುಕೊಂಡು ಹೋಗಿತ್ತು. ಇದರಿಂದ ರಿಪೇರಿ ಮಾಡಲು ಡ್ಯಾಂನಲ್ಲಿದ್ದ ಅರ್ಧದಷ್ಟು ನೀರು ಖಾಲಿ ಮಾಡಬೇಕಿತ್ತು. ಇದರಿಂದ ರೈತರು ಆತಂಕಕ್ಕೀಡಾಗಿದ್ದರು. ಆದ್ರೆ, ತಜ್ಞ ಹರಸಾಹಸಪಟ್ಟು ಇನ್ನೂ ಜಲಾಶಯದಲ್ಲಿ 70 ಟಿಎಂಸಿ ನೀರು ಇರುವಾಗಲೇ ಗೇಟ್ ದುರಸ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಆತಂಕದಲ್ಲಿದ್ದ ರೈತರು ಕೊಂಚ ನಿರಾಳರಾಗಿದ್ದರು. ಆದ್ರೆ, ಇದೀಗ ಗೇಟ್​ನ ದುರಸ್ತಿ ಸಂಪೂರ್ಣ ಮುಕ್ತಾಯವಾಗಿದ್ದು, ಒಂದು ಹನಿ ನೀರು ಪೋಲಾಗದಂತೆ ಮಾಡಿದ್ದಾರೆ. ಅಲ್ಲದೇ ಜಲಾಶಯಕ್ಕೆ ನೀರು ಸಹ ಹರಿದುಬರುತ್ತಿದೆ. ಇದರಿಂದ ಜಲಾಶಯ ತುಂಬುವ ಭರವಸೆ ಚಿಗುರೊಡೆದಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ.

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಇದೇ ಆಗಸ್ಟ್ 10 ರ ರಾತ್ರಿ 10:50 ರ ವೇಳೆ ಕೊಚ್ಚಿಕೊಂಡು ಹೋಗಿತ್ತು. 19 ನೇ ಗೇಟ್ ವೊಂದರಿಂದಲೇ ಬರೋಬ್ಬರಿ 35 ಸಾವಿರ ಕ್ಯೂಸೆಕ್ ನೀರು ಹೊರಹೋಗ್ತಿತ್ತು. ಇನ್ನು ಜಲಾಶಯದಿಂದ ಒಂದೇ ವಾರದಲ್ಲಿ ನಲವತ್ತೈದು ಟಿಎಂಸಿಗೂ ಹೆಚ್ಚು ನೀರು ವ್ಯರ್ಥವಾಗಿ ಹರಿದು ಹೋಗಿತ್ತು. ಇದಕ್ಕಾಗಿ ನಿರಂತರವಾಗಿ ಒಂದು ವಾರ ಕಾಲ ಶ್ರಮವಹಿಸಿದ್ದ ಸಿಬ್ಬಂದಿ, ಸ್ಟಾಪ್ ಲಾಗ್ ಗೇಟ್ ನ 5 ಎಲಿಮೆಂಟ್ ಗಳನ್ನು ಅಳವಡಿಸಿ, ಹರಿಯುವ ನೀರನ್ನು ತಡೆಯುವಲ್ಲಿ ಸಫಲರಾಗಿದ್ದರು. ಆಗಸ್ಟ್ 17 ರಂದು 5 ಎಲಿಮೆಂಟ್ ಗಳ ಪ್ರಕ್ರಿಯೆಯನ್ನು ಮುಗಿಸಿದ್ದರು. ಎಲಿಮೆಂಟ್ ಅಳವಡಿಕೆ ಪೂರ್ಣಗೊಂಡರೂ ಕೂಡ ಗೇಟ್ ನಿಂದ ಅಲ್ಪಪ್ರಮಾಣದ ನೀರು ಹೊರ ಹೋಗುತ್ತಿತ್ತು. ಹೀಗಾಗಿ ಕಳೆದ 2 ದಿನಗಳಿಂದ ಮತ್ತೆ ಕೆಲಸ ಆರಂಭಿಸಿದ ಸಿಬ್ಬಂದಿ, ಇದೀಗ ಹನಿ ನೀರು ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗದಿಂದ ಬಂದಿದ್ದ ಮುಳುಗು ತಜ್ಞರು ಮತ್ತು ಜಲಾಶಯದ ಸಿಬ್ಬಂದಿ, ಎಲಿಮೆಂಟ್ ಗಳಿಗೆ ವೆಲ್ಡಿಂಗ್ ಮಾಡುವ ಮೂಲಕ ನೀರು ಹೊರಹೋಗದಂತೆ ತಡೆಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಹೀಗಾಗಿ ನಿನ್ನೆಯಿಂದ ಕ್ರಸ್ಟ್‌ ಗೇಟ್ ನಂ. 19 ಸೇರಿದಂತೆ ಯಾವುದೇ ಕ್ರಸ್ಟ್‌ ಗೇಟ್ ಗಳ ಮೂಲಕ ಜಲಾಶಯದಿಂದ ನದಿಗೆ ಹನಿ ನೀರು ಕೂಡಾ ಹೊರಗೆ ಹೋಗುತ್ತಿಲ್ಲ.

ಮೊನ್ನೆವರಗೆ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟಿದ್ದರಿಂದ ನದಿ ತುಂಬಿ ಹರಿಯುತ್ತಿತ್ತು. ಆದ್ರೆ ಇದೀಗ ಜಲಾಶಯದಲ್ಲಿ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ನೀರನ್ನು ಸ್ಟಾಪ್ ಮಾಡಲಾಗಿದೆ. ಹೀಗಾಗಿ ತುಂಗಭದ್ರಾ ನದಿಯಲ್ಲಿ ಕಲ್ಲುಬಂಡೆಗಳು ಮಾತ್ರ ಕಾಣುತ್ತಿವೆ.

ಜಲಾಶಯದಲ್ಲಿ ಹೆಚ್ಚಾಗುತ್ತಿದೆ ನೀರಿನ ಪ್ರಮಾಣ..!
ಇನ್ನು ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಆಗಸ್ಟ್ 17 ರಂದು ಜಲಾಶಯದಲ್ಲಿ 71 ಟಿಎಂಸಿ ನೀರು ಇತ್ತು. ಆದ್ರೆ ಮೂರೇ ದಿನದಲ್ಲಿ ಜಲಾಶಯದ ಮಟ್ಟಿಗೆ 77 ಟಿಎಂಸಿಗೆ ಹೆಚ್ಚಳವಾಗಿದೆ.

ಮೂರೇ ದಿನದಲ್ಲಿ 6 ಟಿಎಂಸಿಯಷ್ಟು ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಜಲಾಶಯ ಮತ್ತೆ ತುಂಬುವ ಭರವಸೆ ಮೂಡಿದೆ.

ಪ್ರತಿನಿತ್ಯ ಜಲಾಶಯಕ್ಕೆ 35 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇದೆ. ಇನ್ನು ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬರುವಂತೆ ಸಾಧ್ಯತೆ ಇದೆ. ಹೀಗಾಗಿ ಇನ್ನು ಕೆಲವೇ ದಿನದಲ್ಲಿ ಜಲಾಶಯ ತುಂಬಬಹುದು ಎಂದು ಹೇಳಲಾಗುತ್ತಿದೆ. ಇದು ಜಲಾಶಯದ ನೀರನ್ನೇ ನಂಬಿದ ರೈತರ ಸಂತಸ ಹೆಚ್ಚಳ ಮಾಡುವಂತೆ ಮಾಡಿದೆ.

ಜಲಾಶಯದ ಗೇಟ್ ಸಂಪೂರ್ಣವಾಗಿ ಬಂದ್ ಆಗಿರುವುದು ಒಂದೆಡೆ ಖುಷಿ ಆಗಿದ್ದರೆ, ಇನ್ನೊಂದಡೆ ಮತ್ತೆ ಟಿಬಿ ಡ್ಯಾಂಗೆ ನೀರು ಬರ್ತಿರೋದು ಜನರ ಸಂತಸವನ್ನು ಇಮ್ಮಡಿಗೊಳಿಸಿದೆ.


Share It

You cannot copy content of this page