ಅಲಹಾಬಾದ್: ಗೋವುಗಳೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಆರೋಪಿಗೆ ಜಾಮೀನು ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ.
ಗೋವುಗಳೊಂದಿಗೆ ಅನೈಸರ್ಗಿಕ ಕ್ರಿಯೆಯಲ್ಲಿ ತೊಡಗಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಆರೋಪಿ ಹರಿಕಿಶನ್ ಎಂಬಾತ ಜಾಮೀನು ನೀಡಬೇಕೆಂದು ಕೋರಿ ಎರಡನೇ ಬಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿಯೂಶ್ ಅಗರ್ ವಾಲ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಅರ್ಜಿದಾರರ ಪರ ವಕೀಲರು ಆರೋಪಿಯು ಮುಗ್ದರಾಗಿದ್ದಾರೆ. ಅವರು ಗ್ರಾಮದ ಪ್ರಧಾನರ ಕುಟುಂಬಕ್ಕೆ ಸೇರಿದ್ದು, ಅವರನ್ನು ಸೋಲಿಸುವ ಸಲುವಾಗಿ ಇಂತಹ ಆರೋಪವನ್ನು ಮಾಡಿ ದೂರು ಸಲ್ಲಿಸಲಾಗಿದೆ.
ಪ್ರಕರಣದ ಸಾಕ್ಷಿದಾರರಲ್ಲಿ ನಾಲ್ವರು ಆರೋಪವನ್ನು ಬೆಂಬಲಿಸಿಲ್ಲ. ಇನ್ನು ಕೃತ್ಯಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ವಿಡಿಯೋ ಯಾವ ಮೊಬೈಲ್ ನಿಂದ ರೆಕಾರ್ಡ್ ಮಾಡಲಾಗಿದೆ ಎಂಬುದನ್ನು ದೂರಿನಲ್ಲಿ ಅಥವಾ ಸಾಕ್ಷಿದಾರರ ಹೇಳಿಕೆಯಲ್ಲಿ ತಿಳಿಸಿಲ್ಲ. ಆದ್ದರಿಂದ ಜಾಮೀನು ನೀಡಬೇಕು ಎಂದು ಕೋರಿದ್ದಾರೆ.
ಆದರೆ, ಸರ್ಕಾರದ ಪರ ವಕೀಲರು ಜಾಮೀನು ಮನವಿಯನ್ನು ತಿರಸ್ಕರಿಸುವಂತೆ ಕೋರಿದ್ದಾರೆ. ಜತೆಗೆ ಅರ್ಜಿದಾರ ಆರೋಪಿ ಕೊಟ್ಟಿಗೆಯಲ್ಲಿ ಗೋವುಗಳೊಂದಿಗೆ ಅನೈಸರ್ಗಿಕ ಕ್ರಿಯೆಯಲ್ಲಿ ಭಾಗಿಯಾಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ ಎಂದು ವಾದಿಸಿದ್ದಾರೆ.
ಜತೆಗೆ, ಮುಖ್ಯ ಪಶು ವೈದ್ಯಾಧಿಕಾರಿ ಸಲ್ಲಿಸಿರುವ ವೈದ್ಯಕೀಯ ವರದಿಯು ಆರೋಪಿಯ ಅನೈಸರ್ಗಿಕ ಕೃತ್ಯವನ್ನು ಹೇಳುತ್ತದೆ. ಆರೋಪಿ ಜಾಮೀನು ಕೋರಿ ಸಲ್ಲಿಸಿರುವ ಎನೇ ಅರ್ಜಿಯಲ್ಲಿಯೂ ಯಾವುದೇ ಹೊಸ ಆಧಾರಗಳನ್ನು ನೀಡಿಲ್ಲ. ಹೀಗಾಗಿ ಅರ್ಜಿದಾರ ಆರೋಪಿಗೆ ಜಾಮೀನು ನೀಡಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಮನವಿ ವಜಾ ಮಾಡಿದೆ.
ಮೂಲ: Lawtime.in

