ಅಫಜಲಪುರ : ತಾಲ್ಲೂಕಿನ ಫರಹತಾಬಾದ್ ವಲಯದ ಹೊನ್ನಕಿರಣಗಿ, ಮಾರ್ಗವಾಗಿ ತೋನಶಿಹಳ್ಳಿ ಗ್ರಾಮಕ್ಕೆ ಹೋಗುವ 5 ಕಿ.ಮೀ ಉದ್ದದ ರಸ್ತೆ ಕಾಮಗಾರಿಯು ಪಿಎಂಜಿಎಸ್ ವೈ ಯೋಜನೆಯಡಿಯಲ್ಲಿ ಅಂದಾಜು ಸುಮಾರು 5.54 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ರಸ್ತೆ ಕಾಮಗಾರಿಯನ್ನು ಶಾಸಕ ಎಂ.ವೈ. ಪಾಟೀಲ್ ಅವರು ಪರಿಶೀಲನೆ ನಡೆಸಿದರು.
ನಂತರ ಸ್ಥಳದಲ್ಲೇ ಇದ್ದ ಅಧಿಕಾರಿಗಳ ಜೊತೆ ಮಾತನಾಡಿದ ಅವರು, ನಾನು ಯಾವ ಗ್ರಾಮಕ್ಕೆ ಹೋಗುತ್ತಿದ್ದೇನೆ ಎಂದು ನನ್ನ ಬೆಂಬಲಿಗರಿಂದ ಮಾಹಿತಿ ಪಡೆದುಕೊಂಡು ನಾನು ಕಾಮಗಾರಿ ನಡೆಯುವ ಸ್ಥಳಕ್ಕೆ ಆಗಮಿಸಿದಾಗ ಮಾತ್ರ ಅಧಿಕಾರಿಗಳು ನನ್ನ ಎದರು ಪ್ರತ್ಯಕ್ಷವಾಗಿ ನಂತರ ಕಾಮಗಾರಿ ನಡೆಯುವ ಸ್ಥಳದಿಂದ ಹೊರಟು ಹೋಗುತ್ತೀರಿ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರದಲ್ಲಿಯೂ ಕೂಡಾ ನಮ್ಮ ಪಕ್ಷದ ಸರ್ಕಾರ ಇಲ್ಲದೆ ಇದ್ದರೂ ಅವರ ಜೊತೆ ಗುದ್ದಾಡಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದು ಆದರೂ ಕೂಡಾ ಕೆಲ ಅಧಿಕಾರಿಗಳ ಅಸಡ್ಡೆತನದಿಂದ ಕೆಲವೊಂದು ಹಳೆಯ ಹಿಂದಿನ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದಿಲ್ಲ ಅಸಮಧಾನ ವ್ಯಕ್ತಪಡಿಸಿದ ಅವರು, ಸದ್ಯ ಈಗ ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿದೆ ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ಗ್ರಾಮಗಳು ನನ್ನ ವ್ಯಾಪ್ತಿಯಲ್ಲಿ ಬರುತ್ತವೆ ಅಲ್ಲದೆ ನಾನು ಒಂದು ಕ್ಷಣ ವಿಶ್ರಮಿಸದೆ ಸರ್ಕಾರದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಹಾಗೂ ಸಂಬಂಧಪಟ್ಟ ಸಚಿವರಗಳನ್ನು ಭೇಟಿಯಾಗಿ ಅವರ ಮನವೊಲಿಸಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಪ್ರತಿ ಗ್ರಾಮದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಯೋಜನೆಯ ರೂಪಿಸಿ ಕಾಮಗಾರಿಗಳಿಗೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ ಎಂದರು.
ಆದಾಗ್ಯೂ, ಸರ್ಕಾರದಿಂದ ತಂದ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು. ಅದನ್ನು ಬಿಟ್ಟು ನಾನು ಬಂದಾಗ ಮಾತ್ರ ನನ್ನ ಎದುರು ಪ್ರತ್ಯಕ್ಷವಾಗಿ ನಂತರ ನೀವಾಯ್ತು ನಿಮ್ಮ ಕಚೇರಿವಾಯಿತು ಎಂದು ಅಂದು ಬಿಟ್ಟರೆ ಕ್ಷೇತ್ರ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದರು.
ಇನ್ನಾದರೂ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ಪದೇಪದೇ ಭೇಟಿ ನೀಡಬೇಕು. ಪ್ರತಿ ಇಲಾಖೆಯ ತಾಲೂಕಿನ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರದಿಂದ ಬಂದಿರುವ ಯೋಜನೆಗಳು ಫಲಾನುಭವಿಗಳಿಗೆ ಅನುಷ್ಠಾನಗೊಳ್ಳುತ್ತಿದೆ ಎಂದು ಪರಿಶೀಲಿಸಬೇಕು ಹಾಗೂ ಕ್ಷೇತ್ರದಲ್ಲಿ ನಡೆಯುವ ರಸ್ತೆ, ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ ಎಂಬ ಬಗ್ಗೆ ಪರಿಶೀಲಿಸಿ ಗುತ್ತಿಗೆದಾರರಿಂದ ಗುಣಮಟ್ಟದ ನಿಗದಿ ಪಡಿಸಿದ ಅವಧಿಯಲ್ಲಿ ಕಾಮಗಾರಿಗಳು ಮುಗಿಯಬೇಕು. ಒಂದು ವೇಳೆ ಗುಣಮಟ್ಟದ ಕಾಮಗಾರಿ ಹಾಗೂ ನಿಗದಿಪಡಿಸಿದ ಅವಧಿ ಒಳಗೆ ಆಗದೆ ಇದ್ದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಶಾಸಕರ ಬೆಂಬಲಿಗರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.