ಅಫಜಲಪುರ : ಜೇವರ್ಗಿ ತಾಲ್ಲೂಕಿನ ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಮತ್ತು ಹೈದ್ರಾಬಾದ್ ಕರ್ನಾಟಕ ವಿಮೋಚನೆ ಹೋರಾಟಗಾರ ಹಾಗೂ ಮಾಜಿ ಶಾಸಕ ದಿ. ಕೆ.ಚನ್ನಬಸಪ್ಪ ಕುಳಗೇರಿ ಅವರ ಬದುಕು ಮತ್ತು ಹೋರಾಟದ ಕುರಿತು ಅಭಿನಂದನಾ ಗ್ರಂಥ ಪುಸ್ತಕ ಲೋಕಾರ್ಪಣೆ ಹಾಗೂ ಅವರ ಪುತ್ಥಳಿ ಅನಾವರಣ ಸಮಾರಂಭಕ್ಕೆ ಆಗಮಿಸಲು ಕೋರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದಿನಾಂಕ ಮತ್ತು ಸಮಯ ನಿಗದಿಪಡಿಸಬೇಕೆಂದು ಶಾಸಕ ಎಂ.ವೈ ಪಾಟೀಲ್ ಅವರು ಮನವಿ ಮಾಡಿದರು.
ಬುಧವಾರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಮತ್ತು ಹೈದ್ರಾಬಾದ್ ಕರ್ನಾಟಕ ವಿಮೋಚನೆ ಹೋರಾಟಗಾರ ಹಾಗೂ ಮಾಜಿ ಶಾಸಕ ದಿ. ಕೆ. ಚನ್ನಬಸಪ್ಪ ಕುಳಗೇರಿ ಅವರ ಬದುಕು ಮತ್ತು ಹೋರಾಟದ ಕುರಿತು ಅಭಿನಂದನಾ ಗ್ರಂಥ ಪುಸ್ತಕ ಲೋಕಾರ್ಪಣೆ ಹಾಗೂ ಅವರ ಪುತ್ಥಳಿ ಅನಾವರಣ ಸಮಾರಂಭಕ್ಕೆ ಆಗಮಿಸಲು ಒಪ್ಪಿಗೆ ಸೂಚಿಸಿದ್ದು ಶೀಘ್ರ ದಿನಾಂಕ ನಿಗದಿ ಪಡಿಸಿ ನಂತರ ತಮ್ಮ ಗಮನಕ್ಕೆ ತರಲಾಗುವುದೆಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮತಕ್ಷೇತ್ರದ ಫರತಾಬಾದ್ ವಲಯದ ಕೌಲಗಾ (ಕೆ) ಗ್ರಾಮದಲ್ಲಿ ಜರುಗಿದ ಸಂಗೊಳ್ಳಿ ರಾಯಣ್ಣನ ಜಯಂತಿ ಹಾಗೂ ನಡೆದ ಸಭೆ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಸಚಿವ ಸಂಪುಟ ಆಗಮಿಸಿದ ಸಂದರ್ಭ ನೆನಪಿಸಿಕೊಂಡು ಮುಖ್ಯಮಂತ್ರಿಗಳು ಸಂತಸದ ಮಾತುಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಹಾಗೂ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅರುಣಕುಮಾರ್ ಎಂ.ವೈ. ಪಾಟೀಲ್, ಹಿರಿಯ ಸಾಹಿತಿಗಳಾದ ಎ.ಕೆ. ರಾಮೇಶ್ವರ್, ಅಮರನಾಥ್ ಕುಳಗೇರಿ, ಮುಖಂಡ ಮಹಾಂತೇಶ್ ಕೌಲಗಿ ಮುಂತಾದವರು ಉಪಸ್ಥಿತರಿದ್ದರು.
ಸ್ವಾತಂತ್ಯ್ರ ಹೋರಾಟಗಾರ ಹಾಗೂ ಮಾಜಿ ಶಾಸಕ ದಿ. ಕೆ. ಚನ್ನಬಸಪ್ಪ ಕುಳಗೇರಿ ಅವರ ಪುತ್ತಳಿ ಸುಮಾರು ಎರಡು ವರ್ಷಗಳ ಹಿಂದೆಯೇ ಜೇವರ್ಗಿ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಅವರ ಪುತ್ತಳಿ ಅನಾವರಣಕ್ಕೆ ಸಿದ್ದಗೊಂಡಿದ್ದರೂ ಕಳೆದ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಾಸಕ ಅಜಯ್‌ಸಿಂಗ್ ಅವರು ಪುತ್ಥಳಿಯ ಅನಾವರಣ ಸಮಾರಂಭವನ್ನು ಮುಂದೂಡಿದ್ದರು. ಹೀಗಾಗಿ ಕಾಲ ಕೂಡಿ ಬಂದಿರಲಿಲ್ಲ ಎಂದು ಹೇಳಲಾಗುತ್ತಿದೆ.
ವಿದ್ಯಾರ್ಥಿ ದೆಸೆಯಲ್ಲಿಯೇ ಅನ್ಯಾಯದ ಎದುರು ಎದ್ದುನಿಂತು ಸೆಡ್ಡು ಹೊಡೆದವರು. ನಿಜಾಮ ಸರ್ಕಾರದೊಂದಿಗೆ ಹೋರಾಡಿದ ಅವರ ಬದುಕಿನ ನಿಸ್ವಾರ್ಥ ಸೇವೆ ಅವರ ಕೀರ್ತಿಗೆ ಕಳಸವಾಗಿದೆ. ಅವರ ಜನಪರ ಕಾರ್ಯಗಳೊಂದಿಗೆ ಅವರನ್ನು ಸ್ಮರಿಸುವುದು ಈ ಭಾಗದ ಜನರ ಕರ್ತವ್ಯವಾಗಿದೆ. ಹಾಗಾಗಿ ಪ್ರತಿಮೆ ಅನಾವರಣದ ಪ್ರಕ್ರಿಯೆಗಳು ಈಗ ಬಿರುಸುಗೊಂಡಿವೆ.