ಬೆಂಗಳೂರು : ಜಾತಿಗಣತಿ ವರದಿ ಮಂಡನೆ ಆಗಲಿರುವ ಕಾರಣಕ್ಕೆ ನಿರೀಕ್ಷೆ ಹುಟ್ಟು ಹಾಕಿದ್ದ ಸಚಿವ ಸಂಪುಟ ಸಭೆಯು ಅ.18ರ ಬದಲಿಗೆ ಅ.25ರ ಶುಕ್ರವಾರಕ್ಕೆ ಮುಂದೂಡಿಕೆಯಾಗಿದೆ.
ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಅನುಷ್ಠಾನದ ಕುರಿತು ಅ.7 ರಂದು ಹಿಂದುಳಿದ ವರ್ಗಗಳ ಸಚಿವರು, ಶಾಸಕರ ಸಭೆ ನಡೆಸಿದ್ದರು.
ಸಭೆ ಬಳಿಕ ಅ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೇ ಜಾತಿಗಣತಿ ವರದಿಯನ್ನು ಮಂಡಿಸುತ್ತೇವೆ. ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ವರದಿ ಅನುಷ್ಠಾನದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.
ಅ.17ರಂದೇ ಸಂಪುಟ ಸಭೆ ನಡೆಯಬೇಕು. ಆದರೆ ವಾಲ್ಮೀಕಿ ಜಯಂತಿಯಿಂದಾಗಿ ಅ.18ರಂದು ಸಭೆ ನಡೆಸಲಿದ್ದೇವೆ. ಅಂದೇವರದಿ ಸಂಪುಟದಲ್ಲಿ ಮಂಡಿಸಲಿದ್ದೇವೆ. ಇದು ಬರೀ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ. 7 ಕೋಟಿ ಕನ್ನಡಿಗರ ಸಮೀಕ್ಷೆ ಎಂದು ಹೇಳಿದ್ದರು.
ಇದೀಗ ಅ.18 ರಂದು ನಡೆಯಬೇಕಿದ್ದ ಸಂಪುಟ ಸಭೆಯನ್ನು ಅ.25 ರಂದು ನಡೆಯುವಂತೆ ದಿನಾಂಕ ನಿಗದಿಪಡಿಸಿದ್ದು, ಸಭೆ ಸೂಚನಾ ಪತ್ರ ಹೊರಡಿಸಲಾಗಿದೆ. ಜಾತಿಗಣತಿ ಕುರಿತು ಆರೋಪ- ಪ್ರತ್ಯಾರೋಪಗಳು ನಡೆಯುತ್ತಿರುವಾಗಲೇ ಸಚಿವ ಸಂಪುಟ ಸಭೆ ಒಂದು ವಾರಗಳ ಕಾಲ ಮುಂದೂಡಿರುವುದು ತೀವ್ರ ಕುತೂಹಲ ಮೂಡಿಸಿದೆ.