ಬೆಂಗಳೂರು: ‘ಅವ್ರು ಮಾತಾಡೋದ್ ಕಡಿಮೆ, ಆದ್ರೆ ಕೆಲಸ ಮಾಡೋದ್ ಜಾಸ್ತಿ, ಯಾವುದೇ ಕೆಲಸ ಮಾಡಿದ್ರೂ ಅಚ್ಚುಕಟ್ಟಾಗಿ ನಿಭಾಯಿಸ್ತಾರೆ’ ಇದು ಸಿಎಂ ಸಿದ್ದರಾಮಯ್ಯ ಅವರು ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಕೊಂಡಾಡಿದ ಪರಿ.
ಹಾಸನಾಂಬೆ ದೇವಸ್ಥಾನದ ಕಾರ್ಯಕ್ರಮದ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ರಾಜ್ಯದ ದೊಡ್ಡ ದೊಡ್ಡ ದೇವಸ್ಥಾನದಲ್ಲಿ ವಿಜೃಂಭಣೆಯ ಜಾತ್ರಾ ಮೋಹೋತ್ಸವಗಳು ನಡೆಯುತ್ತಿವೆ. ಅದನ್ನೆಲ್ಲ ಅವರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಎಂದರು.
ಮುಜರಾಯಿ ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದ್ದಾರೆ. ಅರ್ಚಕರಿಗೆ ಅನುಕೂಲವಾಗುವಂತೆ ನಿಯಮ ಜಾರಿ ಮಾಡಿದ್ದಾರೆ. ಅವರು ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ಧಿಗೆ ತಂದಿರುವ ಕಾನೂನಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ರಾಜ್ಯಪಾಲರು ಸಹಿ ಹಾಕಬೇಕಿದೆ.
KSRTC ರಾಮಲಿಂಗಾ ರೆಡ್ಡಿ ಅವರು ಸಚಿವರಾದಾಗ ದೇಶದ ಪ್ರತಿಷ್ಠಿತ ಸಾರಿಗೆ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗಿದೆ. ಹೊಸ ಹಿಸ ಬಸ್ ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಹೊಸದಾಗಿ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಇಷ್ಟೆಲ್ಲ ಸಾಧನೆಗಳು ಸಾರಿಗೆ ಇಲಾಖೆಯಲ್ಲಿ ಆಗುತ್ತಿವೆ.
ಬಿಜೆಪಿ ನಾಯಕರು ಹಿಂದೂ ದೇವಸ್ಥಾನಗಳ ವಿಚಾರದಲ್ಲಿ ರಾಜಕೀಯ ಮಾಡುತ್ತಾರೆ. ಆದರೆ, ಅದೇ ದೇವಸ್ಥಾನಗಳ ಅಭಿವೃದ್ಧಿ, ಅರ್ಚಕರ ಕ್ಷೇಮಾಭಿವೃದ್ಧಿ ವಿಚಾರ ಬಂದಾಗ ರಾಮಲಿಂಗಾ ರೆಡ್ಡಿ ಅವರ ಬದ್ಧತೆಯನ್ನು ಹಿಂದಿನ ಸರಕಾರ ಪ್ರದರ್ಶಿಸಿಲ್ಲ. ಇದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.