ಸುದ್ದಿ

ಕರಾಳ ದಿನ ಕರೆ: ಎಂಇಎಸ್‌ಗೆ ಹೈಕೋರ್ಟ್ ನೋಟಿಸ್

Share It

ಬೆಳಗಾವಿ : ರಾಜ್ಯೋತ್ಸವಕ್ಕೆ ಪ್ರತಿಯಾಗಿ ಯಾವುದೇ ಕಾರಣಕ್ಕೂ ಕರಾಳ ದಿನ ಆಚರಿಸಬೇಡಿ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಪರಿಪರಿಯಾಗಿ ಎಂಇಎಸ್ ನಾಯಕರಿಗೆ ಈಗಾಗಲೇ ಹಲವು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಅವರು ಇದರಿಂದ ಹಿಂದೆ ಸರಿಯುತ್ತಿಲ್ಲ. ಈ ಕುರಿತು ಕರ್ನಾಟಕ ಹೈಕೋರ್ಟ್ ಇದೀಗ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್ )ಗೆ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಕನ್ನಡ ನಾಡಿನಲ್ಲಿ ಕನ್ನಡ ವಿರೋಧಿ ಧೋರಣೆ ತಡೆಯುತ್ತಾ ಬಂದಿರುವ ಎಂಇಎಸ್ ಗೆ ಬಿಗ್ ಶಾಕ್ ನೀಡಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್) ಕನ್ನಡ ರಾಜ್ಯೋತ್ಸವ ವಿರೋಧಿಸಿ ಬೆಳಗಾವಿಯಲ್ಲಿ ನವೆಂಬರ್ 1ರಂದು ನಡೆಸಲು ಉದ್ದೇಶಿಸಿರುವ ಕರಾಳ ದಿನ ಆಚರಣೆಯ ಪ್ರತಿಭಟನೆಗೆ ಅವಕಾಶ ನೀಡದಂತೆ ಪ್ರತಿಬಂಧಿಸಲು ಆದೇಶಿಸಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಅಧ್ಯಕ್ಷ ಮನೋಹರ ಕಿಣೇಕರ ಅವರಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಎಂ.ವಡಗಾಂವ್‌ನ ಮಲ್ಲಪ್ಪ ಛಾಯಪ್ಪ ಅಕ್ಷರದ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನ್ಯಾಯಮೂರ್ತಿ ಕೆ.ಸೋಮಶೇಖ‌ರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎನ್.ಪಿ.ಅಮೃತೇಶ್ ಅವರು, ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಉಗ್ರ ರೀತಿಯ ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಇದಕ್ಕೆ ಸರ್ಕಾರ ಅನುಮತಿ ನೀಡದೇ ಇದ್ದಾಗ್ಯೂ ಪ್ರತಿಭಟಿಸುವ ಮೂಲಕ ತನ್ನ ಉದ್ಧಟತನ ಮೆರೆಯುತ್ತಿದೆ. ಇವರ ವಿರುದ್ಧ ಪೊಲೀಸರು ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಇದಕ್ಕೆ ಸರ್ಕಾರದ ಪರ ವಕೀಲರು, ಕನ್ನಡ ರಾಜ್ಯೋತ್ಸವವನ್ನು ನಿರಾತಂಕವಾಗಿ ನಡೆಸಲು ಸರ್ಕಾರ ಮತ್ತು ಪೊಲೀಸರು ಕ್ರಮ ಕೈಗೊಳ್ಳಬೇಕು. ಕಾನೂನು ಬಾಹಿರ ವರ್ತನೆ ತೋರುವವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಈಗಾಗಲೇ ಆದೇಶಿಸಿದೆ. ಹಾಗಾಗಿ, ಈ ಆದೇಶಕ್ಕೆ ಅನುಗುಣವಾಗಿ ಮುಚ್ಚಳಿಕೆ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಹಾಗೂ ಎಂಇಎಸ್ ಅಧ್ಯಕ್ಷರಿಗೆ ನೋಟಿಸ್‌ ಜಾರಿ ಗೊಳಿಸಲು ಸೂಚಿಸಿದ ಪೀಠ ವಿಚಾರಣೆಯನ್ನು ನವೆಂಬರ್ 5 ಕ್ಕೆ ಮುಂದೂಡಿಕೆ ಮಾಡಿದೆ.


Share It

You cannot copy content of this page