ಗಂಗಾವತಿ: ಬುಕ್ಕಸಾಗರದ ಮಠದಲ್ಲಿ 16ನೇ ಶತಮಾನದ ಶಾಸನಗಳು ಪತ್ತೆ

Share It

ಗಂಗಾವತಿ:ಗಂಗಾವತಿ ಸಮೀಪದ ಬುಕ್ಕಸಾಗರದ ಮಠದಲ್ಲಿ 16 ನೇ ಶತಮಾನದ ತಾಮ್ರ ಶಾಸನಗಳು ಪತ್ತೆಯಾಗಿವೆ.

ಹೊಸಪೇಟೆ ತಾಲೂಕಿನ ಬುಕ್ಕಸಾಗರದ ಕರಿಸಿದ್ದೇಶ್ವರ ಮಠಕ್ಕೆ ಭೇಟಿ ಕೊಟ್ಟ ಹಿರಿಯ ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ, ಎರಡು ತಾಮ್ರ ಶಾಸನಗಳು ಇರುವುದನ್ನು ದೃಢಪಡಿಸಿದ್ದು, ಇವು 16 ನೇ ಶತಮಾನಕ್ಕೆ ಸೇರಿದ ದಾನ ಶಾಸನಗಳು ಎಂದು ದೃಢಪಡಿಸಿದ್ದಾರೆ.

ಮಠದಲ್ಲಿ ಒಟ್ಟು ಮೂರು ಶಾಸನಗಳಿದ್ದು, ಒಂದು ಈಗಾಗಲೇ ಪ್ರಕಟವಾಗಿದೆ. ಉಳಿದೆರಡು ಅಪ್ರಕಟಿತ. ತಾಮ್ರ ಶಾಸನಗಳ ಬಗ್ಗೆ ಪರಿಶೀಲನೆಗೆ ಮಠದ ಹಾಲಿ ಸ್ವಾಮೀಜಿ ಕರಿಸಿದ್ದೇಶ್ವರ ವಿಶ್ವಾರಾಧ್ಯ, ವಿಶ್ವನಾಥಸ್ವಾಮಿ ಅವಕಾಶ ಮಾಡಿಕೊಟ್ಟಿದ್ದಾರೆ.

1612ರ ಕಾಲಘಟ್ಟದಲ್ಲಿ ಚಂದ್ರಗಿರಿಯನ್ನು ಕೇಂದ್ರವನ್ನಾಗಿಸಿಕೊಂಡು ಆಡಳಿತ ಮಾಡುತ್ತಿದ್ದ ವಿಜಯನಗರ ಅರವೀಡು ಮನೆತನದ ವೆಂಕಟಪತಿದೇವರಾಯ ಬುಕ್ಕಸಾಗರದ ಕರಿಸಿದ್ದೇಶ್ವರ ಮಠಕ್ಕೆ ಜಂಗಮಾರ್ಚನೆಗಾಗಿ ಗಂಗಾವತಿ ಬಳಿಯ ಕಲ್ಗುಡಿ ಎಂಬ ಗ್ರಾಮವನ್ನು ದಾನವಾಗಿ ನೀಡಿದ ಬಗ್ಗೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕಾಗಿ ಜಂಗಮರ ಕಲ್ಗುಡಿ ಎಂದು ಹೆಸರು ಬಂದಿದೆ‌

ಮತ್ತೊಂದು ಶಾಸನ ತೆಲುಗು ಭಾಷೆ ಮತ್ತು ಕನ್ನಡ ಲಿಪಿಯಲ್ಲಿದೆ. ವಿಜಯನಗರ ಸಾಮ್ರಾಟ ಬುಕ್ಕರಾಯನ ಕಾಲದಲ್ಲಿ ಕುಂದ್ರುಪಿ ರಾಜ್ಯದ ವೀರಮಲ್ಲನಗೌಡ ರೆಡ್ಡಿಯು ನೀಡಿದ ದಾನದ ಬಗ್ಗೆ ಶಾಸನ ಉಲ್ಲೇಖಿಸಿದೆ. ಮತ್ತೊಂದು ಶಾಸನ ಕನ್ನಡ ಲಿಪಿಯಲ್ಲಿದ್ದು, ಕೆಳದಿ ದೊರೆ ವೆಂಕಟಪ್ಪನಾಯಕನ ಸೂಚನೆಯಂತೆ ಮಹಾನಾಡು ಹಾಗೂ ನಾನಾ ಪ್ರದೇಶಕ್ಕೆ ದಾನ ನೀಡಿದ ಬಗ್ಗೆ ಉಲ್ಲೇಖವಿದೆ.

25 ವ್ಯಾಪಾರಿಗಳು ಮಠದಲ್ಲಿ ನಡೆಸುತ್ತಿದ್ದ ಮಹೇಶ್ವರರ ಆರಾಧನೆಗಾಗಿ ಮೂರುವೀಸ ಅಡಕೆ, ಒಂದು ಎತ್ತಿನ ಹೋರಿನ ಮೆಣಸು, ಭತ್ತ, ಉಪ್ಪಿನ ಹೇರಿಗೆ ಒಂದಕ್ಕೆ ಅರ್ಧವೀಸ ತೆರಿಗೆಯನ್ನು ದತ್ತಿಯಾಗಿ ನೀಡಿದ ಬಗ್ಗೆ ತಿಳಿಸುತ್ತದೆ.

ಈ ಶಾಸನಗಳು ಬುಕ್ಕಸಾಗರ ಮಠದ ಗುರು ಪರಂಪರೆ ಹಾಗೂ ಸಮಕಾಲೀನ ಆಳರಸರ ಹಾಗೂ ವರ್ತಕರ ಮೇಲಿದ್ದ ಪ್ರಭಾವ ತಿಳಿಯಲು ಸಹಾಯಕವಾಗಿದ್ದು, ಚಾರಿತ್ರಿಕ ಮಹತ್ವದ್ದಾಗಿವೆ. ಇವುಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುವುದೆಂದು ಡಾ.ಕೋಲ್ಕಾರ ಹೇಳಿದ್ದಾರೆ


Share It

You May Have Missed

You cannot copy content of this page