ಚನ್ನಪಟ್ಟಣ : ರಾಜ್ಯ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಪೂರ್ಣಗೊಳಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ಕ್ಷೇತ್ರದ ಎಸ್.ಎಂ.ಹಳ್ಳಿಯಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ಪ್ರಚಾರ ನಡೆಸಿದ ಮಾಜಿ ಪ್ರಧಾನಿ ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸುವ ಮೂಲಕ ಪ್ರಧಾನಿ ಮೋದಿ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಲಪಡಿಸಿ’ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನ ನಡತೆ ಮತ್ತು ಸಂಸ್ಕೃತಿಯನ್ನು ಕಟುವಾಗಿ ಟೀಕಿಸಿದ ಅವರು; ಜನರನ್ನು ಈ ಸರ್ಕಾರ ಸುಲಿಗೆ ಮಾಡುತ್ತಿದೆ. ಎಲ್ಲಾ ರೀತಿಯಲ್ಲಿಯೂ ಜನತೆಯನ್ನು ಶೋಷಣೆ ಮಾಡುತ್ತಿದೆ. ಇಂಥ ಸರ್ಕಾರ ಇರಬಾರದು. ಇದ್ದರೆ ಜನರಿಗೆ ಒಳ್ಳೆಯದು ಆಗುವುದಿಲ್ಲ ಎಂದು ಅವರು ಗುಡುಗಿದರು.
ಮೇಕೆದಾಟು ಮಾಡಿಯೇ ತೀರುತ್ತೇವೆ: ಕಾಂಗ್ರೆಸ್ ಪಕ್ಷದಿಂದ ಮೇಕೆದಾಟು ಯೋಜನೆ ಕಾರ್ಯಗತ ಮಾಡಲು ಸಾಧ್ಯವಿಲ್ಲ. ನಿಖಿಲ್ ಕುಮಾರಸ್ವಾಮಿ ಅವರು ಗೆದ್ದರೆ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಹೋರಾಟ ನಡೆಸಿ ಮೇಕೆದಾಟು ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ದೇವೇಗೌಡರು ಭರವಸೆ ನೀಡಿದರು.
ಐ.ಎನ್.ಡಿ.ಐ.ಎ. ಮೈತ್ರಿಕೂಟವನ್ನು ಟೀಕಿಸಿದ ದೇವೇಗೌಡರು, “ಅವರ ಮೈತ್ರಿಕೂಟದಲ್ಲಿ ಪ್ರಧಾನಿಯಾಗಬಲ್ಲ ಯಾವುದೇ ನಾಯಕ ಇದ್ದಾರೆಯೇ? ಸ್ಟಾಲಿನ್ ಅಥವಾ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬಹುದೇ? ಎಂದು ಟಾಂಗ್ ನೀಡಿದರು.
ಅಲ್ಲದೆ; ಐದು ಗ್ಯಾರಂಟಿಳನ್ನು ಪ್ರಶ್ನಿಸಿದ ಮಾಜಿ ಪ್ರಧಾನಿಗಳು; ಮಾಡುವ ಕೆಲಸವನ್ನು ಅಚ್ಚುಕಟ್ಟಿನಿಂದ ಮಾಡಬೇಕು. ಜನರ ನಿರೀಕ್ಷೆ ತಲುಪುವಲ್ಲಿ ಇವು ವಿಫಲವಾಗಿವೆ. ಇವುಗಳನ್ನು ಬಹಳ ಕಾಲ ನಿಭಾಯಿಸಲು ಸರಕಾರದಿಂದ ಆಗುವುದಿಲ್ಲ ಎಂದ ಅವರು; ಅಗ್ಗದ ಭರವಸೆಗಳನ್ನು ಕೊಟ್ಟು ಜನರ ಭಾವನೆಗಳ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಆದರೆ, ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲ ಜನರನ್ನು ಬಲಪಡಿಸಬೇಕು.
ನಾನು ಕಾಡುಗೊಲ್ಲ ಮತ್ತು ಬೆಸ್ತ ಸಮುದಾಯಗಳನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸುವ ಖಚಿತ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಕಾಡುಗೊಲ್ಲ ಸಮುದಾಯವನ್ನು ಈ ಪ್ರವರ್ಗಕ್ಕೆ ಸೇರಿಸಲು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಅವರು ಹೇಳಿದರು.