ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 288 ಕ್ಷೇತ್ರಗಳ ಪೈಕಿ ೯೭ ಕ್ಷೇತ್ರದಲ್ಲಿ ಒಬ್ಬ ಮಹಿಳೆಯೂ ಚುನಾವಣೆಗೆ ಸ್ಪರ್ಧಿಸಿಲ್ಲ ಎಂಬುದು ಮಹಿಳಾ ಸಬಲೀಕರಣ ಹಾಗೂ ರಾಜಕೀಯ ಪ್ರಾತಿನಿಧ್ಯದ ಅಣಕದಂತಿದೆ.
224 ಕ್ಷೇತ್ರಗಳ ಪೈಕಿ 4120 ಸ್ಪರ್ಧಿಗಳು ಕಣದಲ್ಲಿದ್ದು, ಇದರಲ್ಲಿ ಕೇವಲ 359 ಮಹಿಳೆಯರು ಮಾತ್ರವೇ ಸ್ಪರ್ಧೆ ಮಾಡಿದ್ದಾರೆ. ಇದು ಶೇ. 10ಕ್ಕಿಂತ ಕಡಿಮೆಯಿದ್ದು, ಮಹಿಳೆಯರಿಗೆ ಶೇ.50 ರಷ್ಟು ಪ್ರಾತಿನಿಧ್ಯ ನೀಡಬೇಕು ಎಂಬ ಹೋರಾಟಕ್ಕೆ ಉರುಳಿಲ್ಲದಂತಾಗಿದೆ.
ರಾಜ್ಯದಲ್ಲಿ ಪ್ರಮುಖವಾಗಿ ಹೋರಾಟ ನಡೆಸುತ್ತಿರುವ ಎರಡು ರಾಜಕೀಯ ಒಕ್ಕೂಟಗಳು ಕೇವಲ 55 ಮಹಿಳೆಯರನ್ನು ಮಾತ್ರವೇ ಕಣಕ್ಕಿಳಿಸಿವೆ. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಯಿಂದ 29 ಮಹಿಳೆಯರು ಕಣದಲ್ಲಿದ್ದರೆ, ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟದಿಂದ 26 ಮಹಿಳೆಯರು ಕಣದಲ್ಲಿದ್ದಾರೆ. ಆ ಮೂಲಕ ರಾಷ್ಟ್ರೀಯ ಪಕ್ಷಗಳೇ ಮಹಿಳಾ ಪ್ರಾತಿನಿಧ್ಯವನ್ನು ಕಡೆಗಣಿಸಿರುವುದು ಕಂಡುಬರುತ್ತಿದೆ.
ಸ್ವತಂತ್ರ ಅಭ್ಯರ್ಥಿಗಳು ಹಾಗೂ ವಂಚಿತ್ ಬಹುಜನ್ ಅಘಾಡಿ ಪಕ್ಷಗಳಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದು ವಿಶೇಚವಾಗಿದೆ. ಪುಣೆ ಜಿಲ್ಲೆಯ ಪಾರ್ವತಿ ವಿಧಾನಸಭೆ ಕ್ಷೇತ್ರದಲ್ಲಿ ಅತಿಹೆಚ್ಚು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಎರಡು ಒಕ್ಕೂಟದ ಅಭ್ಯರ್ಥಿಗಳು ಮಹಿಳೆಯರೇ ಆಗಿದ್ದು, ಒಟ್ಟು ಏಳು ಮಹಿಳಾ ಅಭ್ಯರ್ಥಿಗಳು ಕಣದಲ್ಲಿರುವುದು ವಿಶೇಷ.
ಉಳಿದಂತೆ ಔರಂಗಾಬಾದ್ ಪೂರ್ವದಲ್ಲಿ 6, ನಾಗ್ಪುರ ದಕ್ಷಿಣ, ಜಲಗಾಂವ್, ಡಿಯೋನಾಲಿ, ಕುರ್ಲಾ ಕ್ಷೇತ್ರಗಳಲ್ಲಿ 5 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸಬೇಕು ಎಂಬ ವಾದ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಗಮನಹರಿಸಬೇಕು ಎಂಬ ಕೂಗು ಇಲ್ಲಿಂದಲೇ ಆರಂಭವಾಗಿದೆ.