ಅಪರಾಧ ಸುದ್ದಿ

ಮರಕುಂಬಿ ಪ್ರಕರಣ‌ ಮತ್ತೊಂದು ಕಂಬಾಲಪಲ್ಲಿ ಘಟನೆಯಾಗಲಿಲ್ಲ: ಯಾಕೆ ಗೊತ್ತಾ?

Share It

ಒಂದೇ ಊರು, ಹಲವು ಬೀದಿ, ಬೀದಿಗೊಂದು ಹೆಸರು, ದೇವರು ಜಾತಿ ಧರ್ಮ ಇವು ಯಾರು ಹುಟ್ಟಾಕಿದ ಕಲ್ಪನಾತ್ಮಕ ಸಂಪ್ರದಾಯಗಳೋ ಗೊತ್ತಿಲ್ಲ. ಅಣ್ಣ ತಮ್ಮಂದಿರAತೆ ಬಾಳಬೇಕಾದ ಊರಿನಲ್ಲಿ ದರಿದ್ರ ರಾಜಕಾರಣ, ಜಾತಿಯ ಪ್ರತಿಷ್ಠೆಗಳು ಮನುಷ್ಯತ್ವವನ್ನೇ ಕೊಂದು ಬದುಕುತ್ತಿವೆ. ಪ್ರೀತಿ ಸಹಬಾಳ್ವೆಗಳನ್ನೆಲ್ಲ ಸ್ವಾರ್ಥ ದ್ವೇಷದ ಬೆಂಕಿಯಲ್ಲಿ ಉರಿಸಿ ಬೂದಿ ಮಾಡುತ್ತಿವೆ. ಮನುಷ್ಯ ಜಾತಿ ಇಲ್ಲದೆ ಬದುಕಲು ಸಾಧ್ಯವಿಲ್ಲದಷ್ಟು ಅಂಟಿಕೊAಡುಬಿಟ್ಟಿದ್ದಾನೆ. ತನ್ನ ಜಾತಿಯ ಜನಕ್ಕೆ ಏನಾದರೂ ಕೆಳವರ್ಗದ ಜನರಿಂದ ಕಿಂಚಿತ್ತು ಅವಮಾನವಾದರೂ, ಅವರ ಗುಡಿಸಲಿಗೆ ಬೆಂಕಿ ಹಚ್ಚಿ ಅಟ್ಟಾಸ ಮೆರೆದು ಬಿಡುತ್ತಾನೆ. ಇನ್ನೂ ಬಲಿತವರ ಕೈಯಲ್ಲಿ ದಲಿತ ಸಿಕ್ಕರೆ ಅವನ ಹೆಣ ಬೀಳಿಸುವವರೆಗೆ ರಕ್ತ ಕುದಿಸಿಕೊಳ್ಳುತ್ತಾರೆ.

ಹೌದು ದಲಿತರು ಮೇಲ್ವರ್ಗಕ್ಕೆ ಯಾಕೆ ಇಷ್ಟವಾಗುವುದಿಲ್ಲ? ಎಂದರೆ ಅದಕ್ಕೆ ಕಾರಣ ಒಂದು ಜಾತಿ. ಮತ್ತೊಂದು ಅವರು ತುಳಿಸಿಕೊಳ್ಳುವುದಕ್ಕೆ ಹುಟ್ಟಿದವರು ಎನ್ನುವ ಭ್ರಮೆ. ಊಟ, ವಸತಿ, ಆಹಾರ ಪದ್ಧತಿ, ಉಡುಗೆ ತೊಡುಗೆ ಇವೆಲ್ಲವೂ ಆನಂತರದ ಕಾರಣಗಳು. ಶೋಷಣೆ ಮಾಡುವವನಿಗೆ ಒಬ್ಬ ಶೋಷಿತ ಬೇಕಲ್ಲ. ಅದಕ್ಕೆ ಅನಕ್ಷರಸ್ಥನಾದ ದಲಿತನನ್ನು ನಾವು ಹೇಗೆ ಬೇಕಾದರೂ ಶೋಷಿಸಬಹುದು, ಹಿಂಸಿಸಬಹುದು ಎಂಬ ಪೂರ್ವಯೋಜಿತ ನಿಯಮಗಳನ್ನು ಅನುಸರಿಸಿಕೊಂಡು ಬಂದರು.

ಬಲಿಷ್ಠನೆನಿಸಿಕೊಳ್ಳಬೇಕಾದರೆ ಒಬ್ಬ ಬಲಹೀನನು ಬೇಕಲ್ಲ. ದಲಿತನನ್ನು ಬಲಹೀನಗೊಳಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಯಿತು. ಅದು ಇವತ್ತಿಗೂ ನಿಲ್ಲುತ್ತಿಲ್ಲ. ಇದಕ್ಕೆ ಸಂಪ್ರಾದಯ, ಸಂಸ್ಕೃತಿ, ಆಚರಣೆ, ದೈವಶಕ್ತಿ ಎಂಬೆಲ್ಲ ಅನುಕೂಲಕರ ಸಿಂಧುಗಳನ್ನು ಮಾಡಿಕೊಂಡು ತಮ್ಮ ಮೇಲು ಸ್ತರವನ್ನು ಕಾಪಾಡಿಕೊಳ್ಳಲಾಗುತ್ತಿದೆ. ದಲಿತ ಊರು, ದೇವರಿಂದ ಹೊರಗಿದ್ದರೂ ದೊಡ್ಡವರ ದೇವರು ಮತ್ತು ಸನಿಹಕ್ಕಾಗಿ ಹಂಬಲಿಸುವ ಆಸೆಯಿಂದ ಮಾತ್ರ ಮುಕ್ತನಾಗಿಲ್ಲ.

ಭಾರತ ಜಾತಿ ಪ್ರಧಾನ ರಾಷ್ಟç. ಇಲ್ಲಿ ಎಲ್ಲರೂ ಸಮಾನರು ಎಂಬ ಸಂವಿಧಾನದ ಆಶಯಕ್ಕೆ ನಾವು ಇವತ್ತಿಗೂ ಬದ್ಧವಾಗಿಲ್ಲ. ಭಾಷಣ ಅಥವಾ ಮತ ಪಡೆಯುವುದಕ್ಕೆ ಮಾತ್ರ ನಾವೆಲ್ಲಾ ಒಂದೇ ಎಂಬ ವಾಕ್ಯವನ್ನು ಹೇಳುತ್ತಿರುತ್ತೇವೆ. ಆದರೆ ಮನಸ್ಸಿನಿಂದ ನಾವು ಯಾವತ್ತು ಒಂದಾಗುವ ಧೋರಣೆಯನ್ನು ತೋರುತ್ತಿಲ್ಲ. ಹಬ್ಬ ಹರಿದಿನಗಳಲ್ಲೂ ಪ್ರತ್ತೇಕತೆಯ ಭಾವಗಳು ನರ್ತಿಸುವುದನ್ನ ಇವತ್ತಿಗೂ ಕಾಣುತ್ತಲೇ ಬಂದಿದ್ದೇವೆ. ಶಾಲಾ ಕಾಲೇಜುಗಳಲ್ಲಿ ಜಾತಿಯತೆಗಳು ತಲೆಯೆತ್ತಿ ಅಲ್ಲಿಯೂ ಬೇಧ ನೀತಿಗಳು ಶಿಕ್ಷಕರಿಂದಲೇ ಆಚರಣೆಯಾಗುತ್ತಿವೆ.

ಅದು ೨೦೧೪, ಆಗಸ್ಟ್ ೨೮, ಕೊಪ್ಪಳ ಜಿಲ್ಲೆಯ ಮರಕುಂಬಿ ಎಂಬ ಪುಟ್ಟ ಗ್ರಾಮದ ಯುವಕರು ಗಂಗಾವತಿ ಪಟ್ಟಣದ ಶಿವೆ ಚಿತ್ರಮಂದಿರಕ್ಕೆ ಪುನೀತ್ ರಾಜಕುಮಾರ್ ಅಭಿನಯದ ‘ಪವರ್’ ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ಟಿಕೇಟ್ ಪಡೆಯುವ ವಿಷಯಕ್ಕೆ ಅಲ್ಲಿದ್ದ ಕೆಲವು ಯುವಕರಿಗೂ ಮತ್ತು ಮರಕುಂಬಿಯ ಮೇಲ್ವರ್ಗದ ಹುಡುಗರಿಗೂ ಜಗಳ ನಡೆದಿತ್ತು. ಆ ಜಗಳ ಹೊಡೆದಾಟಕ್ಕೆ ತಿರುಗಿ ತೀವ್ರ ಸ್ವರೂಪ ಪಡೆದಿತ್ತು.

ಈ ಸಮಯದಲ್ಲಿ ಮರಕುಂಬಿಯ ದಲಿತ ಯುವಕರು ಅಲ್ಲೇ ಇದ್ದರು. ಈ ದಲಿತ ಹುಡುಗರೇ ನಮ್ಮ ಮೇಲೆ ಹಲ್ಲೆಯಾಗುವುದಕ್ಕೆ ಕಾರಣರು ಎಂದು ಪ್ರಬಲ ಜಾತಿಯ ಮಂಜುನಾಥ ಈಳಿಗೇರ ಆಕ್ರೋಶಗೊಂಡರು. ಸಿನಿಮಾ ಮುಗಿದ ನಂತರ ಊರಿಗೆ ತೆರಳಿ ದಲಿತ ಸಮುದಾಯದವರು ವಾಸ ಮಾಡುವ ಕೇರಿಗೆ ನುಗ್ಗಿ ಅಲ್ಲಿನ ಗುಡಿಸಲಿಗೆ ಬೆಂಕಿ ಹಾಕಿದ್ದಲ್ಲದೆ, ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದರು.

ದಲಿತರು ಕೂಡ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಹಲ್ಲೆಗೆ ಮುಂದಾದಾಗ ಹಿಂಸಾಚಾರ ನಡೆದು ಎರಡು ಗುಂಪಿನ ಜನ ಆಸ್ಪತ್ರೆಗೆ ಸೇರಿಕೊಂಡರು. ಮಾತು ಕಥೆಯಲ್ಲಿ ಮುಗಿಯಬಹುದಾಗಿದ್ದ ಜಗಳ ಜಾತಿಯ ಕಾರಣಕ್ಕೆ ಉಗ್ರ ಸ್ವರೂಪವನ್ನು ತಾಳಿಕೊಂಡಿತು.
ಭೀಮೇಶ್ ಎಂಬ ಮಾದಿಗ ಜನಾಂಗದ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿದರು. ಮಂಜುನಾಥ ಈಳಗೇರ ಅವರನ್ನು ಎ-೧ ಆರೋಪಿ ಮಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ೧೧೭ ಮಂದಿ ಆರೋಪಿಗಳನ್ನು ಹಲ್ಲೆ, ದೌರ್ಜನ್ಯ, ಜೀವಬೆದರಿಕೆ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗಕ್ಕೆ ಒಪ್ಪಿಸಲಾಗಿತ್ತು.

ವಿಚಾರಣಾವಧಿಯಲ್ಲಿ ಮೃತಪಟ್ಟಿರುವ ಆರೋಪಿಗಳು ಹಾಗೂ ಇಬ್ಬರು ಬಾಲಕರನ್ನು ಹೊರತುಪಡಿಸಿ ೯೮ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ದಂಡವನ್ನು ವಿಧಿಸಿದ್ದಾರೆ. ಅದರಲ್ಲಿ ಜೀವಾವಧಿ ಶಿಕ್ಷೆ ಮತ್ತು ಜಾತಿನಿಂದನೆ ಕಾಯ್ದೆ ಅನ್ವಯವಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮೂವರಿಗೆ ಐದುವರ್ಷಗಳ ಜೈಲು ಶಿಕ್ಷೆ ಮತ್ತು ಎರಡು ಸಾವಿರ ದಂಡವನ್ನು ವಿಧಿಸಲಾಗಿದೆ

ಈ ತೀರ್ಪು ನೀಡಿರುವ ನ್ಯಾಯಾಧೀಶ ಸಿ. ಚಂದ್ರಶೇಖರ್ “ಇಂಥ ಪ್ರಕರಣದಲ್ಲಿ ಅನುಕಂಪ ತೋರುವುದು ನ್ಯಾಯದ ಅಪಹಾಸ್ಯವಾಗಲಿದೆ” ಎಂದು ಹೇಳಿದ್ದಾರೆ. ಭಾರತದ ಇತಿಹಾಸದಲ್ಲಿ ಇಂಥ ತೀರ್ಪು ಕಂಡಿರಲಿಲ್ಲ. ಮುಂದೆ ಕಾಣಲು ಸಾಧ್ಯವಿಲ್ಲವೇನೊ. ನ್ಯಾಯಾಲಯ ಎಂದರೆ ದುಡ್ಡಿರುವವರಿಗೆ ಮತ್ತು ಪ್ರಭಾವಿಗಳಿಗೆ ಎಂದು ಮಾತನಾಡಿಕೊಳ್ಳುವವರಿಗೆ ಇದೊಂದು ತೀರ್ಪು ನ್ಯಾಯಾಲಯದ ಮೇಲೆ ಗೌರವ ಹೆಚ್ಚುವಂತೆ ಮಾಡಿದೆ.

ಸಿ. ಚಂದ್ರಶೇಖರ್ ಅವರು ೧೯೬೭ ಜುಲೈ ೧೨ ರಂದು ಜನಿಸಿದವರು. ಮೂಲತ ಬೆಂಗಳೂರಿನವರು. ಎಲ್.ಎಲ್.ಎಂ ಪದವಿದರರು. ಬೆಂಗಳೂರಿನ ಹೈಕೋರ್ಟಿನಲ್ಲೇ ನ್ಯಾಯವಾಧಿಯಾಗಿ ವೃತ್ತಿಯನ್ನು ಆರಂಭಿಸುವ ಇವರು, ಪುತ್ತೂರು, ಮಧುಗಿರಿ, ಆನೆಕಲ್, ಹೊಸಕೋಟೆ, ಟಿ.ನರಸೀಪುರ, ಮೈಸೂರು, ದೊಡ್ಡಬಳ್ಳಾಪುರ ಹೀಗೆ ಹಲವಾರು ಜಿಲ್ಲೆ ಮತ್ತು ತಾಲ್ಲೋಕಿನಲ್ಲಿ ನ್ಯಾಯಧೀಶರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಶೇಷ ಎನಿಸುವುದು ಇವರ ವ್ಯಕ್ತಿತ್ವ. ಇವರ ಇ-ಮೇಲ್ ವಿಳಾಸ ‘ವಿಶ್ವಮಾನವ’ ಎಂದಿದೆ.

ಒಬ್ಬ ವ್ಯಕ್ತಿ ಎಷ್ಟೇ ಎತ್ತರಕ್ಕೆ ಏರಿದರು ಆತ ತೋರುವ ಮತ್ತು ನಡೆದುಕೊಳ್ಳುವ ನಡೆಯಿಂದಲೇ ದೊಡ್ಡ ಮನುಷ್ಯನಾಗಿ ನಿಲ್ಲುತ್ತಾನೆ. ಕರ್ನಾಟಕ ಲೋಕಾಯುಕ್ತದಲ್ಲೂ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿರುವ ಸಿ.ಚಂದ್ರಶೇಖರ್ ಅವರು ಪ್ರಸ್ತುತ ಕೊಪ್ಪಳ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂದು ಭಾರತದಾದ್ಯಂತ ಮನೆ ಮಾತಾಗಿದ್ದಾರೆ. ಒಂದು ನ್ಯಾಯದ ತೀರ್ಪು ಮನುಷ್ಯತ್ವಕ್ಕೆ ಕೈ ಮುಗಿಯುವಂತೆ ಮಾಡುತ್ತದೆ ಮತ್ತು ಮನುಕುಲಕ್ಕೆ ಒಂದು ಎಚ್ಚರಿಕೆಯನ್ನು ಕೊಡುತ್ತದೆ ಎಂದರೆ ಆ ತೀರ್ಪು ನೀಡಿದ ವ್ಯಕ್ತಿಯ ಧೈರ್ಯ ತಾಳ್ಮೆ ದೊಡ್ಡದು.
ಡಾ.ಬಿ.ಆರ್.ಅಂಬೇಡ್ಕರ್ ಭಾರತದ ಸಂವಿಧಾನದಲ್ಲಿ ಕಾನೂನುಗಳನ್ನು ರೂಪಿಸುವಾಗ “ನಾನು ಎಷ್ಟೇ ಎಚ್ಚರಿಕೆಯಿಂದ ಕಾನೂನನ್ನು ರಚಿಸಿದರೂ, ತೀರ್ಪು ನೀಡುವವರು ಮನುಷ್ಯರೇ ಆಗಿರುತ್ತಾರೆ. ಅವರು ತಪ್ಪು ಮಾಡುವುದಿಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ” ಎನ್ನುತ್ತಾರೆ. ಆದರೆ ಸಿ.ಚಂದ್ರಶೇಖರ್ ಅಂಬೇಡ್ಕರ್ ಮಾತನ್ನು ಸುಳ್ಳು ಮಾಡುವಂತೆ ನ್ಯಾಯದೇವಿಯ ಮಗನಂತೆ ಕಾಣಿಸಿಕೊಂಡಿದ್ದು ಭಾರತವೇ ಹೆಮ್ಮೆ ಪಡುವಂತದ್ದು. ಒಬ್ಬ ದಕ್ಷ ನ್ಯಾಯಾಧೀಶರು ಚಂದ್ರಶೇಖರ್ ಅವರ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ.

ದಲಿತರ ಮೇಲೆ ನಡೆಯುವ ದೌರ್ಜನ್ಯ , ಹಿಂಸಾಚಾರ ಅಥವಾ ಅಟ್ರಾಸಿಟಿ ಕೇಸಿನಲ್ಲಿ ಹೆಚ್ಚು ಮೋಸಗಳೇ ಆಗುತ್ತವೆ ಎನ್ನುವ ಮಾತು ಕೇಳಿಬರುತ್ತಿತ್ತು. ಅದಕ್ಕೆ ಕಾರಣ ಸಾಕ್ಷö್ಯಗಳ ಕೊರತೆ. ಜನಬಲ ಮತ್ತು ಹಣಬಲದ ಕೊರತೆಯಿಂದ ನ್ಯಾಯ ದಕ್ಕಿಸಿಕೊಳ್ಳುವುದು ಕಷ್ಟವಾಗುತಿತ್ತು. ಎಷ್ಟೋ ದಲಿತರ ಕೇಸುಗಳು ಸಾಕ್ಷö್ಯವಿಲ್ಲದೇ ಸುಪ್ರಿಂಕೋರ್ಟಿನವರೆಗೆ ಹೋಗಿ ಉಸಿರು ಕಳೆದುಕೊಂಡಿವೆ. ಏನಿಲ್ಲದಿದ್ದರೂ ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟು ಹೋದ ಜನರಿಗೆ ಮರಕುಂಬಿಯAತ ಕೇಸುಗಳು ದಲಿತರಿಗೆ ನ್ಯಾಯ ದಕ್ಕಿಸಿಕೊಟ್ಟಿವೆ. ಹತ್ತು ವರ್ಷಗಳ ಕಾಲ ನಡೆದ ಈ ಕೇಸು ಸಾಕ್ಷö್ಯಗಳ ಕಾರಣದಿಂದಲೇ ಜಯಪಡೆದುಕೊಂಡಿದೆ ಎಂಬುದು ಮಾತ್ರ ಸತ್ಯ. ಯಾವುದೇ ಕೇಸಿನಲ್ಲಿ ನ್ಯಾಯಾಲಯಕ್ಕೆ ಬೇಕಿರುವುದು ಸಾಕ್ಷö್ಯಗಳು ಮಾತ್ರ. ಸಾಕ್ಷö್ಯಗಳು ನ್ಯಾಯದ ಪರವಾಗಿ ನಿಂತರೆ ಗೆಲುವು ಸಿಕ್ಕೆ ಸಿಗುತ್ತದೆ.
ಮರಕುಂಬಿ ಗ್ರಾಮದಲ್ಲಿ ೧.೫೦೦ ಸಾವಿರದಷ್ಟು ಜನಸಂಖ್ಯೆ ಇದೆ. ಅಲ್ಲಿ ಈಡಿಗ, ಮುಸ್ಲಿಂ, ರೆಡ್ಡಿ ಹಾಗೂ ಭೋವಿ ಸಮುದಾಯದವರೇ ಹೆಚ್ಛಾಗಿದ್ದಾರೆ. ಮರಕುಂಬಿಯಲ್ಲಿ ದಲಿತರು ಮತ್ತು ಮೇಲ್ವರ್ಗದವರ ನಡುವೆ ಸಂಘರ್ಷಗಳು ಬೂದಿ ಮುಚ್ಚಿದ ಕೆಂಡದAತೆ ಹಾಗಾಗ ಹೊಗೆಯಾಡುತ್ತಲೆ ಇತ್ತು. ಹೋಟೆಲ್‌ಗೆ ಪ್ರವೇಶ ನಿರಾಕರಣೆ, ಕ್ಷೌರದ ಅಂಗಡಿಗಳಿಗೆ ನಿರ್ಬಂಧ, ದಿನಸಿ ಅಂಗಡಿಗಳಿAದ ಅಗತ್ಯ ವಸ್ತುಗಳನ್ನು ಖರೀದಿಸುವಂತಿರಲಿಲ್ಲ. ಇದಕ್ಕೆ ಹಲವು ಸಂಘಟನೆಗಳು ಮಧ್ಯಪ್ರವೇಶ ಮಾಡಿ ಗ್ರಾಮದಲ್ಲಿ ಶಾಂತಿಯ ವಾತಾವರಣವನ್ನು ತರಲು ಪ್ರಯತ್ನಿಸಿದರು ಸಾಧ್ಯವಾಗಿರಲಿಲ್ಲ. ಇದು ದಲಿತ ಯುವಕರಲ್ಲೂ ಸಣ್ಣಗೆ ಮನಸ್ಥಾಪ ಏರ್ಪಡಲು ಕಾರಣವಾಗಿತ್ತು. ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದ ಮೇಲ್ವರ್ಗದ ಕೆಲವು ಕಿಡಿಗೇಡಿಗಳು ದಲಿತರನ್ನು ಪಶುಗಳಂತೆ ಕಾಣುತ್ತಿದ್ದರು. ಶೋಷಣೆಯನ್ನು ಸಹಿಸಿಕೊಂಡು ನಗುಮೊದಿಂದಲೇ ಬದುಕುತ್ತಿದ್ದ ದಲಿತರು ಹಳೆಯ ವೈಶಮ್ಯಗಳನ್ನು ಮರೆಯುತ್ತಾ ಬಂದAತೆ ಹೊಸ ಹೊಸ ಘಟನೆಗಳು ಜರುಗುತ್ತಿದ್ದವು. ಅದರ ಪರಿಣಾಮವಾಗಿಯೇ ದಲಿತರ ಗುಡಿಸಲಿಗೆ ಬೆಂಕಿ ಹಾಕುವ ಧೈರ್ಯವನ್ನು ಮೇಲ್ವರ್ಗದ ಹುಡುಗರು ಮಾಡುತ್ತಾರೆ.
ಯಾರೋ ಮಾಡಿದ ಒಂದು ತಪ್ಪಿಗೆ ಊರಿನ ಸಂಸಾರಗಳು ಬೀದಿಗೆ ಬಿದ್ದಿರುವುದೇನೋ ನಿಜ. ಆದರೆ ತಪ್ಪು ಮಾಡುವುದಕ್ಕಿಂತ ಮುಂಚೆಯೇ ಯೋಚಿಸುವ ಮನಸ್ಥಿತಿ ಬರಬೇಕಿತ್ತು. ಹತ್ತು ವರ್ಷದ ಘಟನೆಗೆ ನ್ಯಾಯಾಲಯ ನೀಡಿದ ತೀರ್ಪನ್ನು ಎಲ್ಲರೂ ಗೌರವಿಸುತ್ತಿದ್ದರೆ, ಶಿಕ್ಷೆಗೆ ಒಳಗಾದವರ ಕಡೆಯ ಸಂಬAಧಿಕರು ನಾನು ಸುಪ್ರಿಂಕೋರ್ಟಿಗೆ ಹೋಗುತ್ತೇವೆ. ಅಲ್ಲಿ ನ್ಯಾಯ ಕೇಳುತ್ತೇವೆ. ನಮ್ಮಗೆ ಅನ್ಯಾಯವಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಮನೆಯವರು ತಪ್ಪೇ ಮಾಡದೆ ಜೈಲು ಶಿಕ್ಷೆ ಅನುಭವಿಸುವಂತಾಗಿದೆ ಎಂದು ವಾದಿಸುತ್ತಿದ್ದಾರೆ. ಈ ವಾದ ವಿವಾದ ಮೇಲ್ಮನವಿ ಎಲ್ಲವನ್ನು ಒಂದು ಕಡೆ ಇಟ್ಟು ನೋಡುವುದಾದರೆ, ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿ ಅವರ ಮೇಲೆ ಹಲ್ಲೆ ಮಾಡುವಾಗ ಇದೇ ಜನ ಅವರನ್ನು ತಡೆದು ‘ಅವರು ನಮ್ಮ ಜೊತೆಯಲ್ಲೇ ಬದುಕುತ್ತಿರುವ ಜನ ಅವರ ಮೇಲೆ ಜಗಳ ಯಾಕೆ?’ ಎಂದು ಪ್ರಶ್ನಿಸಬಹುದಿತ್ತು. ಈಗ ದಲಿತರಿಂದ ನಮ್ಮ ಬದುಕುಗಳು ಬೀದಿಗೆ ಬಿದ್ದವು ಎನ್ನುವವರು ಅವತ್ತು ಗುಡಿಸಲಿಗೆ ಬೆಂಕಿ ಹಚ್ಚಿದವರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿ ಇವರೇ ಅಪರಾಧಿಗಳೆಂದು ಸಾಕ್ಷಿಯನ್ನು ಹೇಳಬಹುದಿತ್ತು. ಹಾಗೆ ಮಾಡಲಿಲ್ಲ. ಸುಡುವ ಮನೆಯಲ್ಲಿ ಚಳಿಕಾಯಿಸಿಕೊಂಡವರೇ ಹೆಚ್ಚು. ಗಳ ಎಳೆದು ತಮಾಷೆ ನೋಡಿದವರು ಇದ್ದರು. ಮರ‍್ನಾಲ್ಕು ಜಾತಿಯವರು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಅದರಲ್ಲಿ ದಲಿತರು ಇದ್ದಾರೆ.
ಕೋಲಾರ ಜಿಲ್ಲೆ ಕಂಬಾಲಪಲ್ಲಿಯಲ್ಲಿ ಐದು ಜನರನ್ನು ಮನೆಯೊಳಗೆ ಕೂಡಿ ಹಾಕಿ ಸುಟ್ಟ ಮೇಲ್ವರ್ಗದವರು ಸಾಕ್ಷಿಯನ್ನು ಹಣದಿಂದ ಕೊಂಡುಕೊAಡು ಹಾಗೂ ಜನಬಲವನ್ನು ಬಳಸಿ ಶಿಕ್ಷೆಯಿಂದ ಪಾರಾದರು. ಬೆಂದು ಹೋದವರ ಕಡೆ ಉಳಿದುಕೊಂಡಿದ್ದ ಮುದಿ ಜೀವ ಸುಪ್ರಿಂಕೋರ್ಟಿನಲ್ಲಿ ನಿಂತು ಕಣ್ಣೀರು ಹಾಕಿದರು ನ್ಯಾಯ ಸಿಗಲಿಲ್ಲ. ಸಾಕ್ಷಿಗಳ ಕೊರತೆಯೆಂದು ಅಪರಾಧಿಗಳನ್ನು ಬಿಟ್ಟು ಕಳಿಸಲಾಯಿತು. ಆಗಾದರೆ ಮನೆಗೆ ಬೆಂಕಿ ಹಚ್ಚಿದ ಅಪರಾಧಿಗಳು ಮತ್ತೊಮ್ಮೆ ಇಂಥ ಕೃತ್ಯಕ್ಕೆ ಇಳಿಯುವುದಿಲ್ಲ ಎಂಬುದು ಯಾವ ನಂಬಿಕೆಯ ಮೇಲೆ? ಈಗಲೂ ಕರ್ನಾಟಕದ ದಲಿತರಲ್ಲಿ ಕಂಬಾಲಪಲ್ಲಿಯ ಘಟನೆ ಹಸಿರಾಗಿಯೇ ಇದೆ. ಬದನಾಳುವಿನ ಘಟನೆ ಮಾಸಿಯೇ ಇಲ್ಲ. ಹೀಗೆ ಇತಿಹಾಸವನ್ನು ಬೆದಕುತ್ತಾ ಹೋದರೆ ದೌರ್ಜನ್ಯದ ಕತ್ತಿಯ ಬಾಯಿಗೆ ತಲೆಕೊಟ್ಟ ದಲಿತರನ್ನು ಎಣಿಸುವುದಕ್ಕೂ ಸಾಧ್ಯವಿಲ್ಲ.
ಮೇಲ್ವರ್ಗದ ಕೆಲವು ಜನರಿಗೆ ದಲಿತರನ್ನು ಕಂಡರೆ ಮನಸಿಗೆ ಹಾವರಾಣಿ ಹೊಕ್ಕಂತೆ ಆಗುತ್ತದೆ ಅನಿಸುತ್ತದೆ. ಸದಾ ದಲಿತರನ್ನು ಕೀಟಲೆ ಮಾಡುವುದು, ಜಾತಿಯ ಹೆಸರೇಳಿ ನಿಂದನೆ ಮಾಡುವುದು, ನಾವು ಹೇಳಿದಂತೆ ಕೇಳಬೇಕು ಎನ್ನುವ ಆಜ್ಞೆ ಮಾಡುವುದು ನಡೆಯುತ್ತಲೇ ಇರುತ್ತದೆ. ಸಂವಿಧಾನ ಬರೆದುಕೊಂಡು ಎಪ್ಪತ್ತೆöÊದು ವರ್ಷಗಳಾಗುತ್ತಾ ಬಂದರೂ ಈಗಲೂ ದಲಿತರು ಅನುಭವಿಸುತ್ತಿರುವ ಶೋಷಣೆಗೆ ಮುಕ್ತಿ ಸಿಗುತ್ತಿಲ್ಲ. ಮರಕುಂಬಿ ಗ್ರಾಮದ ಘಟನೆಗೆ ಸಿಕ್ಕ ತೀರ್ಪು ಒಂದಷ್ಟು ಜನರಿಗೆ ಭಯ ಹುಟ್ಟಿಸಿರುವುದಂತು ಸತ್ಯ. ಜಾತಿ ತಾರತಮ್ಯಗಳಲ್ಲೇ ಭಾರತ ಕಳೆದುಹೋಗುತ್ತಿದೆ. ಮನುಷ್ಯ ಮಾಡಿಕೊಂಡಿರುವ ಈ ಜಾತಿಯ ಜೋಳಿಗೆಗಳನ್ನು ಕಳಚದಿದ್ದರೆ ಮನುಷ್ಯನ ಮನಸ್ಸಿಗೆ ನೆಮ್ಮದಿ ಸಿಗುವುದು ಇಲ್ಲ. ನಾವೆಲ್ಲ ಮನುಷ್ಯರಾಗಿ ವರ್ತಿಸುವುದನ್ನ ಕಲಿಯಬೇಕು. ರಾಜ್ಯದ ನ್ಯಾಯಾಲಯಗಳಲ್ಲಿ ದಾಖಲಾಗಿರುವ ದಲಿತರ ಮೇಲಿನ ದೌರ್ಜನ್ಯದ ಕೇಸುಗಳ ಆರೋಪಿಗಳು ರಾಜಿ ಪಂಚಾಯ್ತಿಗೆ ಮುಂದಾಗುತ್ತಿದ್ದಾರೆ ಎಂಬ ಮಾಹಿತಿಗಳು ನ್ಯಾಯಲಗಳಿಂದ ಕೇಳಿಬರುತ್ತಿದೆ. ಮರಕುಂಬಿಯಲ್ಲಿ ಮತ್ತೆ ಅಶಾಂತಿ, ಅಸಮದಾನ ಹೊಗೆಯಾಡುತ್ತಿದೆ. ಎಲ್ಲ ಮರೆತು ಒಟ್ಟಾಗಿ ಊರ ಹಬ್ಬ ಮಾಡಿದ್ದ ಜನಾಂಗಗಳ ಎದೆಯಲ್ಲಿ ನಿರಾಸೆಯ ಮೋಡ ಕವಿದಿದೆ. ಆದರೆ ಊರ ದೇವತೆಗಿಂತ ನ್ಯಾಯದೇವತೆ ದೊಡವಳು ಅಲ್ವಾ?

ವಿಳಾಸ
ಹಳ್ಳಿವೆಂಕಟೇಶ್
ಕನ್ನಡ ಪ್ರಾಧ್ಯಾಪಕ-ಸಂಶೋಧಕ
ಹಾಸನ
ಮೊ.ನA:೯೫೩೫೭೨೩೬೭೩


Share It

You cannot copy content of this page