ಸಂಸ್ಕೃತಿ ಪ್ರತಿಪಾದಕರ ಬಾಯಿಂದ ಸಂಸ್ಕಾರರಹಿತ ನಡೆ: ಸಿ.ಟಿ.ರವಿ ಹೇಳಿಕೆಗೆ ಸೌಮ್ಯಾ ರೆಡ್ಡಿ ಕೆಂಡಾಮಂಡಲ
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ. ರವಿ ಬಳಸಿರುವ ಪದ ಸಂಸ್ಕೃತಿ ಪ್ರತಿಪಾದಕರೆಂದು ಹೇಳಿಕೊಳ್ಳುವ ಬಿಜೆಪಿ ನಾಯಕರ ನೀಚ ನಾಲಿಗೆಯ ಗುಣವನ್ನು ಹೇಳುತ್ತದೆ ಎಂದು ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಕಿಡಿಕಾರಿದ್ದಾರೆ.
ತಮ್ಮನ್ನು ತಾವು ಸಂಸ್ಕೃತಿ ರಕ್ಷಕರೆಂದು ಬಿಂಬಿಸಿಕೊಳ್ಳುವ ಬಿಜೆಪಿ ನಾಯಕರು ಬಾಯಿ ಬಿಟ್ಟರೆ ಸಾಕು, ಅವರ ಸಂಸ್ಕೃತಿ ತಿಳಿಯುತ್ತದೆ. ಅಂಬೇಡ್ಕರ್ ಕುರಿತಾಗಿಯೇ ಹಗುರವಾಗಿ ಮಾತನಾಡುವ ಅವರು ಮಹಿಳೆಯರ ಬಗ್ಗೆ ಇಂತಹ ಅವಾಚ್ಯ ಪದ ಬಳಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದಿದ್ದಾರೆ.
ಸದನದಂತಹ ಪವಿತ್ರ ಸ್ಥಳದಲ್ಲಿಯೇ ಮಹಿಳೆಯರನ್ನು ಅವಮಾನಿಸುವ ಇವರು, ರಾಜ್ಯದ ದುರ್ಬಲರು, ಶೋಷಿತರು, ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬಹುದು. ಮಹಿಳೆಯರು ಸಿ.ಟಿ. ರವಿ ಹಾಗೂ ಅವರ ಪಕ್ಷದ ನಾಯಕರ ಮನುವಾದಿ ಮನಸ್ಥಿತಿಗೆ ಕುಗ್ಗುವವರಲ್ಲ, ಅವರಿಗೆ ಹೋರಾಟದ ಮೂಲಕ ಉತ್ತರ ನೀಡುತ್ತೇವೆ ಎಂದಿದ್ದಾರೆ.
ಸಿ.ಟಿ.ರವಿಯವರು ಈ ಕೂಡಲೇ ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು. ಬಿಜೆಪಿ ಪಕ್ಷವು ಮಹಿಳೆಯರ ಪರ ಕಾಳಜಿ ಹೊಂದಿದ್ದರೆ ಈ ಕೂಡಲೇ ರವಿಯವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ. ಜತೆಗೆ ಅವರ ವಿರುದ್ಧ ದೂರು ದಾಖಲಾಗಿದ್ದು, ಅವರಿಗೆ ಶಿಕ್ಷೆಯಾಗಬೇಕು. ಬಿಜೆಪಿ ನಾಯಕರ ಇಂತಹ ವರ್ತನೆಯ ವಿರುದ್ಧ ಮಹಿಳಾ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ.