ಬೆಂಗಳೂರು: ಆರೋಗ್ಯವಂತ ಮನುಷ್ಯ ನಷ್ಟು ಶ್ರೀಮಂತ ಜಗತ್ತಿನಲ್ಲಿ ಯಾರೂ ಇಲ್ಲ. ಆತ ಅಂಬಾನಿಯಾದರೂ ಆರೋಗ್ಯವಂತನಲ್ಲದಿದ್ದರೆ, ನೂರಾರು ಸಮಸ್ಯೆಗಳು ಕಾಡುತ್ತವೆ ಎಂದು ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಅನ್ಸರ್ ಅಹಮದ್ ತಿಳಿಸಿದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಸಮಿತಿ ವತಿಯಿಂದ ಆಯೋಜನೆ ಮಾಡಿದ್ದ ಆಯುಷ್ಮಾನ್ – ಆರೋಗ್ಯ ಕರ್ನಾಟಕ ಕಾರ್ಡ್ ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣ ಸುಲಭದ ಮಾತಲ್ಲ. ಒಂದು ಸಮುದಾಯ ಆರೋಗ್ಯವಾಗಿದ್ದರೆ, ಆ ರಾಜ್ಯ, ದೇಶ ಸುಭೀಕ್ಷವಾಗಿರುತ್ತದೆ. ಅಂತಹ ರಾಜ್ಯ ನಿರ್ಮಾಣಕ್ಕೆ ಕರ್ನಾಟಕ ಸರಕಾರ ಅನೇಕ ಆರೋಗ್ಯ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದರು.
ಆಯುಷ್ಮಾನ್ ಭಾರತ್ ಕಾರ್ಡ್ ಮೂಲಕ ರಾಜ್ಯದ ಪ್ರತಿ ಪ್ರಜೆಗೂ ಆರೋಗ್ಯ ವಿಮೆ ನೀಡುವ ಕರ್ನಾಟಕ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಕೆಲ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಸ್ಪಂದಿಸುವುದಿಲ್ಲ ಎಂಬ ದೂರಿದೆ. ಈ ಬಗ್ಗೆ ನಮ್ಮ ಗಮನಕ್ಕೆ ಬಂದರೆ, ಇಲಾಖೆಯ ವತಿಯಿಂದ ಕ್ರಮವಹಿಸುತ್ತೇವೆ. ಎಲ್ಲರೂ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ಪ್ರಮೋದ್ ಶ್ರೀನಿವಾಸ್ ಗ್ಯಾರಂಟಿ ಕಮಿಟಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಸರಕಾರದ ಯೋಜನೆಗಳನ್ನು ಮುಟ್ಟಿಸುತ್ತಿದ್ದಾರೆ. ಹಾಗೆಯೇ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳು ಮುಖ್ಯವಾಹಿನಿಯಲ್ಲಿ ನಿಂತು ಇಡೀ ಕ್ಷೇತ್ರದ ಜನತೆಗೆ ಕಾರ್ಡ್ ಮಾಡಿಸಿಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇಲಾಖೆ ಜತೆಗೆ ಕೈಜೋಡಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಪ್ರಮೋದ್ ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಇರುವ ಬಡವರ ಬಗ್ಗೆ ಕಾಳಜಿಯಿಂದ ಆರೋಗ್ಯ ಕಾರ್ಡ್ ಮಾಡಿಸಿಕೊಡುವ ಕೆಲಸ ನಡೆಯುತ್ತಿದೆ ಇದಕ್ಕಾಗಿ ನಮ್ಮ ತಂಡ ಕೆಲಸ ಮಾಡುತ್ತಿದೆ. ಕಾರ್ಡ್ ಮಾಡಿಸಲು ಕೆಲವರು ಮಾಹಿತಿಯಿಲ್ಲದೆ ತಿಣುಕಾಡುತ್ತಾರೆ. ಅಂತಹವರಿಗೆ ನಮ್ಮ ತಂಡ ಕಾರ್ಡ್ ಮಾಡಿಸಿ ಕೊಡುವ ಜತೆಗೆ, ಅವರಿಗೆ ಸೇವೆಗಳನ್ನು ಒದಗಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕ್ಷೇತ್ರದ ಜನತೆ ಇದರ ಉಪಯೋಗ ಪಡೆಯಬೇಕು ಎಂದು ತಿಳಿಸಿದರು.
ಆರೋಗ್ಯ ಕರ್ನಾಟಕ ಯೋಜನೆ ಮೊದಲು ಅರಿಗೆ ತಂದ ಕರ್ನಾಟಕ ಸರ್ಕಾರವನ್ನು ಶ್ಲಾಘಿಸಿ ಗ್ಯಾರಂಟಿ ಜತೆಗೆ ಆರೋಗ್ಯ ವಿಮೆ ಕೂಡ ಭರಿಸುವ ಕಾಂಗ್ರೆಸ್ ಸರ್ಕಾರ ಜನಪರ ಇರುವ ಏಕೈಕ ಸರ್ಕಾರ ಎಂದು ಹೇಳಿದರು. ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಿ ಇನ್ನಷ್ಟು ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತೇವೆ ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪಪೌರರಾದ ಎಲ್. ಶ್ರೀನಿವಾಸ್, ಜಯನಗರ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ್ ಹಾಗೂ ಇತರರು ಭಾಗವಹಿಸಿದ್ದರು. 250 ಜನರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲಾಯಿತು.