ಬೆಂಗಳೂರು: ಚಿನ್ನದ ಕಳ್ಳಸಾಗಾಣಿಕೆ ಆರೋಪದಲ್ಲಿ ನಟಿ ರನ್ಯಾ ರಾವ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ತನಿಖೆಯನ್ನು ಡಿಆರ್‌ಐ ಮತ್ತು ಸಿಬಿಐ ಅಧಿಕಾರಿಗಳು ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಡಿಆರ್‌ಐ ಅಧಿಕಾರಿಗಳಿಗೆ ಒಂದೊಂದೇ ಅಸಲಿಯತ್ತು ತಿಳಿಯುತ್ತಿದೆ. ನಟಿ ರನ್ಯಾ ರಾವ್ ಚಿನ್ನದ ಬಿಸ್ಕೆಟ್ ಕಳ್ಳಸಾಗಣಿಕೆ ಹಿಂದೆ ಪ್ರಭಾವಿ ಸ್ವಾಮೀಜಿ ಕೃಪಾಕಟಾಕ್ಷವೂ ಇದೆ ಎಂಬ ಅಂಶ ಡಿಆರ್‌ಐ ಮೂಲಗಳಿಂದ ಮಾಹಿತಿ ದೊರೆತಿದೆ.
ನಟಿ ರನ್ಯಾ ರಾವ್, ತರುಣ್ ರಾಜ್ ಮತ್ತು ಪ್ರಭಾವಿ ಸ್ವಾಮೀಜಿ ಈ ಮೂವರ ಗುಂಪು ಚಿನ್ನ ಕಳ್ಳಸಾಗಾಣಿಕೆಯಲ್ಲಿ ಶಾಮೀಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸ್ವಾಮೀಜಿ ದುಬೈನಲ್ಲಿ ಆಫೀಸ್ ತೆರೆದು ಡೀಲಿಂಗ್ ನಡೆಸುತ್ತಿದ್ದರು. ಆಫೀಸ್ನಲ್ಲಿ ಸ್ವಾಮೀಜಿ ಕ್ರಿಫ್ಟೋ ಕರೆನ್ಸಿ, ಹಣ ವಿನಿಮಯ ವ್ಯವಹಾರ ಮಾಡುತ್ತಿದ್ದರು. ಸ್ವಾಮೀಜಿ ರಾಜಕೀಯ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಬೆಂಗಳೂರಿನಲ್ಲಿನ ಸ್ವಾಮೀಜಿ ಮನೆ ಮೇಲೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿತ್ತು.
ರನ್ಯಾ ಪತಿಗೆ ಹೈಕೋರ್ಟ್ ರಿಲೀಫ್
ಚಿನ್ನ ಕಳ್ಳಸಾಗಣೆ ವೇಳೆ ನಟಿ ರನ್ಯಾ ರಾವ್ ಬಂಧನ ಆಕೆಯ ಪತಿ ಜತಿನ್ ಹುಕ್ಕೇರಿಗೂ ಸಂಕಷ್ಟ ತಂದೊಡ್ಡಿತ್ತು. ಡಿಆರ್‌ಐ ಅಧಿಕಾರಿಗಳು ಬಂಧಿಸಬಹುದೆಂಬ ಭೀತಿಯಿಂದ ರನ್ಯಾ ರಾವ್ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ, ಹೈಕೋರ್ಟ್ ಜತಿನ್ ಹುಕ್ಕೇರಿಗೆ ಬಿಗ್ ರಿಲೀಫ್ ನೀಡಿದೆ.
“ಚಿನ್ನ ಕಳ್ಳಸಾಗಣೆ ಪ್ರಕರಣ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿಗೂ ಸಂಕಷ್ಟ ತಂದೊಡ್ಡಿತ್ತು. ವಿಚಾರಣೆಗೆ ಸಹಕರಿಸಿದರೂ ಡಿಆರ್‌ಐ ಅಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆಂದು ಜತಿನ್ ಹುಕ್ಕೇರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಾರ್ಚ್ 3 ರಂದು ರನ್ಯಾ ಬಂಧನದ ಬಗ್ಗೆಯೂ ತಮಗೆ ತಿಳಿಸದೇ ಮನೆ ಮೇಲೆ ದಾಳಿ ಮಾಡಿ ಶೋಧನೆ ನಡೆಸಿದ್ದಾರೆ. ಮನೆಯಲ್ಲಿ ಮಧ್ಯರಾತ್ರಿ 12 ಗಂಟೆವರೆಗೂ ವಿಚಾರಣೆ ನಡೆಸಿದ್ದಲ್ಲದೇ, ಮರುದಿನವೂ ತನಿಖೆ ಮುಂದುವರಿಸಿ 15 ಗಂಟೆ ವಿಚಾರಣೆ ನಡೆಸಿದ್ದಾರೆ.
ಡಿಆರ್‌ಐ ಕಚೇರಿಗೆ ಕರೆಸಿಕೊಂಡು ರಾತ್ರಿವರೆಗೂ ತನಿಖೆ ಮುಂದುವರಿಸಿದ್ದರು. ಮಾರ್ಚ್ 6 ರಂದು ಫೋನ್ ಕರೆ ಮೂಲಕ ಕರೆಸಿಕೊಂಡು ತನಿಖೆ ನಡೆಸಿದರು. ಮಾರ್ಚ್ 9 ರಂದು ಪೋಷಕರ ಕೋರಮಂಗಲದ ನಿವಾಸದಿಂದ ನನ್ನನ್ನು (ಜತಿನ್ ಹುಕ್ಕೇರಿ) ಕರೆತಂದು ಬೆಳಗಿನ ಜಾವದವರೆಗೂ ವಿಚಾರಣೆ ನಡೆಸಿ ಕಿರುಕುಳ ನೀಡಿದ್ದಾರೆಂದು ಜತಿನ್ ಹುಕ್ಕೇರಿ ಅರ್ಜಿ ಸಲ್ಲಿಸಿದ್ದರು.
ರನ್ಯಾ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ: ಪತ್ನಿ ರನ್ಯಾ ರಾವ್ ಮೇಲಿನ ಆರೋಪಕ್ಕೂ ಜತಿನ್ಗೂ ಸಂಬಂಧವಿಲ್ಲ. ಡಿಆರ್‌ಐ ಅಧಿಕಾರಿಗಳು ಸಮನ್ಸ್ ನೀಡಿದಾಗ ತನಿಖೆಗೆ ಸಹಕರಿಸಿದ್ದಾರೆ. 2ನೇ ಬಾರಿ ಯಾವುದೇ ಸಮನ್ಸ್ ನೀಡದೇ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಲ್ಲದೇ ಅವರಿಗೆ ಬೇಕಾದಂತೆ ಹೇಳಿಕೆ ನೀಡುವಂತೆ ಕಿರುಕುಳ ನೀಡಿದ್ದಾರೆ. ಸಮನ್ಸ್ಗೆ ಹಾಜರಾದಾಗ ತನಿಖೆ ಹೇಗೆ ನಡೆಸಬೇಕೆಂಬ ಬಗ್ಗೆ ಸುಪ್ರೀಂಕೋರ್ಟ್ ನಿರ್ದೇಶನಗಳಿವೆ. ಇದನ್ನು ಪಾಲಿಸದೇ ಜತಿನ್ರನ್ನು ಬಂಧಿಸುವ ಸಾಧ್ಯತೆ ಇದೆ. ಹೀಗಾಗಿ ಡಿಆರ್‌ಐ ಅಧಿಕಾರಿಗಳು ಜತಿನ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ನೀಡಬೇಕು ಎಂದು ವಾದಿಸಿದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಹೈಕೋರ್ಟ್ ಪೀಠ ಕಾನೂನಿನ ಪ್ರಕ್ರಿಯೆ ಪಾಲಿಸದೇ ಬಂಧಿಸದಂತೆ ಆದೇಶ ನೀಡಿದೆ. ಈ ಮೂಲಕ ರನ್ಯಾ ರಾವ್ ಪತಿಗೆ ಜತಿನ್ಗೆ ಹೈಕೋರ್ಟ್ ರಿಲೀಫ್ ನೀಡಿದೆ.
ದಾಂಪತ್ಯದಲ್ಲಿ ಬಿರುಕು: ಇನ್ನು, ರನ್ಯಾ ರಾವ್ ಮತ್ತು ಪತಿ ಜತಿನ್ ಹುಕ್ಕೇರಿ ದಾಂಪತ್ಯ ಸರಿಯಾಗಿಲ್ಲ. 2024ರ ಅಕ್ಟೋಬರ್ 6 ರಂದು ಬೆಂಗಳೂರಿನ ಬಾಸ್ಟಿನ್ ರೆಸ್ಟೋರೆಂಟ್ನಲ್ಲಿ ಇಬ್ಬರೂ ಮದುವೆ ಬ್ರೋಕರ್ ಮೂಲಕ ಭೇಟಿಯಾಗಿದ್ದಾರೆ. ಅಕ್ಟೋಬರ್ 23, ರನ್ಯಾ, ಜತಿನ್ ನಿಶ್ಚಿತಾರ್ಥವಾಗಿದೆ. ನವೆಂಬರ್ 27 ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಮದುವೆಯಾಗಿದೆ.