ಬೆಂಗಳೂರು: ಮುಷ್ಕರಗಳ ವಿಚಾರಣದಲ್ಲಿ ಟ್ರಬಲ್ ಶೂಟರ್ ಎನಿಸಿಕೊಂಡಿರುವ ರಾಮಲಿಂಗ ರೆಡ್ಡಿ ಅವರ ತಂತ್ರಗಾರಿಕೆಯ ಮುಂದೆ ಲಾರಿ ಮುಷ್ಕರ ಠುಸ್ ಪಟಾಕಿಯಾಗಿದೆ. ಮೂರನೇ ದಿನಕ್ಕೆ ಲಾರಿ ಮುಷ್ಕರ ಅಂತ್ಯಗೊಂಡಿದೆ.
ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರವನ್ನು ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಗುರುವಾರ ವಾಪಸ್ ಪಡೆದಿದೆ. ಮೊದಲ ದಿನ ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿದ್ದ ಮುಷ್ಕರ, ಚೆನ್ನಾರೆಡ್ಡಿ ನೇತೃತ್ವದ ಲಾರಿ ಮಾಲೀಕರ ಮತ್ತೊಂದು ಬಣ ಮುಷ್ಕರಕ್ಕೆ ಬೆಂಬಲ ನೀಡದೇ ಇದ್ದ ಕಾರಣದಿಂದ ಎರಡನೇ ದಿನಕ್ಕೆ ವೇಗ ಕಳೆದುಕೊಂಡು ಸಹಜ ಸ್ಥಿತಿಗೆ ಬರಲು ಪ್ರಾರಂಭವಾಯಿತು. ಆದ ಕಾರಣ ಜಿ.ಆರ್ ಷಣ್ಮುಖಪ್ಪ, ಸಾರಿಗೆ ಸಚಿವರನ್ನು ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲು ಭೇಟಿ ಮಾಡಿದರು. ಹೇಗಿದ್ದರೂ ಮಾರನೆ ದಿನ ಮತ್ತಷ್ಟು ಸಹಜ ಸ್ಥಿತಿಗೆ ಬರುತ್ತಿದ್ದ ಮುಷ್ಕರವು ತಮ್ಮ ಕೈತಪ್ಪಲಿದೆ ಎಂಬುದನ್ನು ಅರಿತ ಸಂಘಟಕರು ಮಾತುಕತೆಗೆ ಮುಂದಾದರು ಎಂಬುದು ಇದರ ಹಿಂದಿನ ರಹಸ್ಯವಾಗಿತ್ತು.
ಸಂಘದ ಪದಾಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎರಡು ಬಾರಿ ಈ ಮೊದಲೇ ಸಂಧಾನ ಸಭೆ ನಡೆಸಿದ್ದರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಒಂದು ಬಾರಿ ಸಂಧಾನ ಸಭೆ ನಡೆಸಿದ್ದರು. ಮೊದಲೆರಡು ಸಂಧಾನದಲ್ಲಿ ಡೀಸೆಲ್ ಬೆಲೆ ಇಳಿಸುವ, ಟೋಲ್ ರದ್ದು ಮಾಡುವ ಬೇಡಿಕೆ ಹೊರತುಪಡಿಸಿ, ಉಳಿದ ಬೇಡಿಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಈಡೇರಿಸುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದ್ದರು.
ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್‌ನೆಸ್ ಸರ್ಟಿಫಿಕೆಟ್) ನವೀಕರಣ ಶುಲ್ಕ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಮಾರ್ಗಸೂಚಿ ನಿರಾಕರಿಸುವುದು ಮತ್ತು ನವೀಕರಣಕ್ಕೆ ₹13 ಸಾವಿರ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಒಪ್ಪಿಕೊಳ್ಳದೇ ಕಡಿಮೆ ಮಾಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಹಾಗೂ
ಡೀಸೆಲ್ ದರವನ್ನು ಹಿಂದಿನ ಬಿಜೆಪಿ ಸರ್ಕಾರ 2023ಕ್ಕಿಂತ ಮೊದಲು ಯದ್ವಾತದ್ವಾ ಏರಿಕೆ ಮಾಡಿರುವ ಲಾರಿ ಮಾಲೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಾರಿಗೆ ಸಚಿವರು ಮಾತನಾಡಿ ಈ ಬಗ್ಗೆ ತಾವುಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ , ನಾವು ಕೂಡ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.
ಆನ್‌ಲೈನ್‌ನಲ್ಲಿ ದಂಡ ಪಾವತಿ ವ್ಯವಸ್ಥೆ ಜಾರಿ, ಹಲವು ವರ್ಷಗಳಿಂದ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡವರಿಗೆ ಒಂದು ಬಾರಿಯ ತೀರುವಳಿಗೆ (ಒನ್ ಟೈಮ್ ಸೆಟ್ಸ್‌ಮೆಂಟ್) ಅವಕಾಶದ ಬಗ್ಗೆ ಸಕಾರಾತ್ಮಕವಾಗಿ ಸಾರಿಗೆ ಸಚಿವರು ಸ್ಪಂದಿಸಿದ್ದರು.
ನಗರಗಳಿಗೆ ಸರಕು ವಾಹನಗಳ ಪ್ರವೇಶಕ್ಕೆ ಕೇವಲ 5 ಗಂಟೆ ಅವಕಾಶ ನೀಡಿರುವ ಬಗ್ಗೆ, ನಗರಗಳಿಗೆ ಸರಕು ಸಾಗಾಣಿಕೆ ವಾಹನಗಳ ಪ್ರವೇಶ ನಿರ್ಬಂಧ ಸಡಿಲಿಕೆ, ಗಡಿ ತನಿಖಾ ಠಾಣೆ ಸಮಸ್ಯೆ ಬಗೆಹರಿಸುವ ಸಂಬಂಧ ಹಾಗೂ ಪೊಲೀಸರ ಕಿರುಕುಳ ತಪ್ಪಿಸಲು ಗೃಹ ಸಚಿವರ ಜತೆ ಮಾತುಕತೆ ನಡೆಸುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ.
ಈ ಮೇಲಿನ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪರವರು ಮುಷ್ಕರ ವಾಪಸ್ಸು ತೆಗೆದುಕೊಂಡಿದ್ದಾರೆ. ಇದು ರಾಮಲಿಂಗ ರೆಡ್ಡಿ ಅವರ ತಂತ್ರಗಾರಿಕೆಗೆ ಒಲಿದ ಜಯ ಎಂಬ ಮಾತುಗಳು ಸಾರಿಗೆ ವಲಯದಲ್ಲಿ ಕೇಳಿಬಂದಿದೆ.