ಸುದ್ದಿ

ಭೀಮಗಢ ವನ್ಯಜೀವಿ ವಲಯದ ತಾಳೇವಾಡಿ ನಿವಾಸಿಗಳ ಸ್ಥಳಾಂತರ: ಮೇ 17ರಂದು ನಿವಾಸಿ ಕುಟುಂಬಗಳಿಗೆ ಚೆಕ್ ವಿತರಣೆ: ಈಶ್ವರ ಖಂಡ್ರೆ

Share It

ಬೆಂಗಳೂರು: ಕಾಡುಪ್ರಾಣಿಗಳ ದಾಳಿಯ ಭೀತಿಯೊಂದಿಗೆ ನಿತ್ಯ ಬದುಕು ಸಾಗಿಸುತ್ತಿದ್ದ ಬೆಳಗಾವಿ ಜಿಲ್ಲೆ ಭೀಮಗಢ ವನ್ಯಜೀವಿ ಧಾಮದ ಒಳಗೇ ಇದ್ದ ತಾಳೇವಾಡಿಯ ಗವಾಳಿ ಗ್ರಾಮದ 27 ಕುಟುಂಬಗಳು ಸ್ವ ಇಚ್ಛೆಯಿಂದ ಸ್ಥಳಾಂತರಕ್ಕೆ ಸಮ್ಮತಿಸಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಸ್ವಯಂಪ್ರೇರಿತರಾಗಿ ಅರಣ್ಯದೊಳಗಿನಿಂದ ಸಮಾಜದ ಮುಖ್ಯ ವಾಹಿನಿ ಸೇರಲು ಬಯಸಿ ಬಂದಿರುವ 27 ಕುಟುಂಬ ಘಟಕಗಳಿಗೆ ಮೇ 17ರಂದು ಮೊದಲ ಹಂತದಲ್ಲಿ ತಾವೇ ತಲಾ 10 ಲಕ್ಷ ರೂ. ಚೆಕ್ ವಿತರಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುಟುಂಬ ಘಟಕಗಳು ಕಾಡಿನೊಳಗಿರುವ ಮನೆಗಳನ್ನು ತೊರೆದು ಸ್ಥಳಾಂತರಗೊಂಡ ಬಳಿಕ, ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದ ತರುವಾಯ ಪ್ರತಿ ಕುಟುಂಬದ ಘಟಕಕ್ಕೆ ಉಳಿದ 5 ಲಕ್ಷ ರೂ. ಚೆಕ್ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆ, ತಾವು ಖುದ್ದು ಈ ಪ್ರದೇಶಕ್ಕೆ ಭೇಟಿ ನೀಡಿ ಅರಣ್ಯವಾಸಿಗಳೊಂದಿಗೆ ಸಂವಾದ ನಡೆಸಿದಾಗ ಅವರೆಲ್ಲರೂ ಸ್ವಯಂ ಪ್ರೇರಿತವಾಗಿ ಕಾಡಿನಿಂದ ಹೊರಬರುವ ಇಂಗಿತ ವ್ಯಕ್ತಪಡಿಸಿದ್ದರು. ಆ ನಂತರ ಅವರ ಸ್ಥಳಾಂತರಕ್ಕೆ ಅವಶ್ಯಕವಾದ ಗ್ರಾಮಸಭೆ ಇತ್ಯಾದಿ ಪ್ರಕ್ರಿಯೆಯನ್ನು ಅರಣ್ಯ ಅಧಿಕಾರಿಗಳು ನಡೆಸಿದ್ದಾರೆ ಎಂದೂ ತಿಳಿಸಿದ್ದಾರೆ.

ಎಲ್ಲರೂ ಆಧುನಿಕ ಜಗತ್ತಿನಲ್ಲಿ ಜೀವಿಸುತ್ತಿರುವಾಗ ಈ ಅರಣ್ಯವಾಸಿಗಳು ರಸ್ತೆ, ನೀರು, ವಿದ್ಯುತ್ ಈ ಎಲ್ಲ ಸೌಕರ್ಯಗಳಿಂದ ವಂಚಿತರಾಗಿರುತ್ತಾರೆ.

ಅನಾರೋಗ್ಯದ ಸಂದರ್ಭದಲ್ಲಿ ರಾತ್ರಿಯ ವೇಳೆ ಕಾಡಿನಿಂದ ಊರಿಗೆ ರೋಗಿಗಳನ್ನು ಕರೆದುಕೊಂಡು ಹೋಗುವುದು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ಮುಂದೆ ಬಂದ ತಾಳೇವಾಡಿಯ ಗೌವಳಿ ಗ್ರಾಮದ ಸ್ಥಳಾಂತರ ಮೊದಲ ಹಂತದಲ್ಲಿ ನಡೆಯುತ್ತಿದ್ದು, ಉಳಿದ ಇನ್ನೂ ಕೆಲವು ಗ್ರಾಮಗಳ ಸ್ಥಳಾಂತರಕ್ಕೆ ಶೀಘ್ರ ಕ್ರಮ ವಹಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.


Share It

You cannot copy content of this page