ಬೆಂಗಳೂರು: ದೂರದಿಂದ ನೋಡಿದರೆ ಮರ್ಸಿಡಿಸ್ ಬೆಂಜ್ ನಂತೆ ಕಾಣುವ ಈ ಕಾರು ಮರ್ಸಿಡಿಸ್ ಬೆಂಜ್ ಅಂತೂ ಅಲ್ಲವೇ ಅಲ್ಲ. ವಾಹನೋದ್ಯಮದಲ್ಲಿ ಒಂದು ಕಾಲದಲ್ಲಿ ಬಿರ್ಲಾ ಒಡೆತನದ ಹಿಂದೂಸ್ತಾನ್ ಮೋಟಾರ್ಸ್ ನ ಅನಭಿಷಿಕ್ತ ದೊರೆಯಂತೆ ಮೆರೆದು ಇತಿಹಾಸದ ಗರ್ಭ ಸೇರಿದ್ದ ಅಂಬಾಸಿಡರ್ ಕಾರಿನ ಹೊಸ ಅವತಾರವಿದು.
ದೇಶದಲ್ಲಿ ತೊಂಬತ್ತರ ದಶಕದವರೆಗೆ ಭಾರತೀಯ ರಸ್ತೆಗಳಲ್ಲಿ ಧೂಳೆಬ್ಬಿಸುತ್ತ ಮೆರೆದಿದ್ದ ಈ ಅಂಬಾಸಿಡರ್ ಕಾರು ಬಹುರಾಷ್ಟ್ರೀಯ ಕಂಪೆನಿಗಳ ದಾಂಗುಡಿಯಿಂದ ನೇಪಥ್ಯಕ್ಕೆ ಸೇರಿಹೋಗಿತ್ತು. ಹೀಗಾಗಿ, ಈಗ ಮತ್ತೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೊಸ ಪೀಳಿಗೆಯ ಜನತೆಯನ್ನು ಸೆಳೆಯಲು ಸ್ಪರ್ಧಾತ್ಮಕ ಯುಗದಲ್ಲಿ ಹಲವು ಮಾದರಿಗಳಲ್ಲಿ ಪರಿಚಯಿಸಲು ಹಿಂದುಸ್ತಾನ್ ಮೋಟರ್ಸ್ ಉತ್ಸುಕವಾಗಿದೆ.

ಆ ಮೂಲಕ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನ ಗತವೈಭವವನ್ನು ಮರಳಿ ಪಡೆಯುವ ಇರಾದೆಯಲ್ಲಿರುವುದು ಭಾರತೀಯರಾದ ನಮಗೆ ಹೆಮ್ಮೆ ಎನ್ನಬಹುದು.
‘ಅಂಬಾಸಿಡರ್ ಆರಾಮ್ ಕೇ ಲಿಯೇ, ಎಂಬ ಘೋಷವಾಕ್ಯದಿಂದಲೇ ಜಾಗತಿಕ ಮನ್ನಣೆ ಪಡೆದಿದ್ದ ಈ ಕಾರು ಬಹುರಾಷ್ಟ್ರೀಯ ಕಂಪೆನಿಗಳ ಕಾರುಗಳ ಮಧ್ಯೆ ನಂಬರ್ ಒನ್ ಸ್ಥಾನ ಮರಳಿ ಪಡೆಯುವಲ್ಲಿ ಯಶಸ್ವಿಯಾಗಲಿ ಎಂದು ನೆಟ್ಟಿಗರು ಹಾರೈಸುತ್ತಿದ್ದಾರೆ.
ಕಾರು ಮಾರುಕಟ್ಟೆಗೆ ಬರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ ಸಾವಿರಾರು ಜನ ತಮ್ಮ ಹಳೆಯ ದಿನಗಳಿಗೆ ಮರಳುವ ಇರಾದೆ ತೋರಿದ್ದಾರೆ. ಹಿಂದೂಸ್ತಾನ್ ಮೋಟಾರ್ಸ್ ಪರ ನಿಲ್ಲುವ ಮುನ್ಸೂಚನೆ ನೀಡಿದ್ದಾರೆ. ನಮ್ಮ ಮನೆಯ ಕಾರು ಹಿಂದೂಸ್ತಾನ್ ಆಗಿರುತ್ತದೆ ಎಂದೆಲ್ಲ ಟ್ವೀಟ್, ಕಮೆಂಟ್ ಮಾಡುತ್ತಿದ್ದಾರೆ.