ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಕೆಲಸ ನಿರ್ವಹಿಸುತ್ತಿದ್ದ 94 ಮಂದಿ ಹೊರಗುತ್ತಿಗೆ ನೌಕರರಿಗೆ ರಾಜ್ಯಸರ್ಕಾರ ಗೇಟ್ ಪಾಸ್ ನೀಡಿದೆ.
ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೌಕರರನ್ನ ನೇಮಕ ಮಾಡಿ ಮುಡಾಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿದ್ದ ಆರೋಪ ಕೇಳಿ ಬಂದ ಬೆನ್ನಲ್ಲೇ ಹೆಚ್ಚುವರಿಯಾಗಿ ನೇಮಕವಾಗಿದ್ದ 94 ಮಂದಿ ಹೊರ ಗುತ್ತಿಗೆ ನೌಕರರನ್ನ ಇದೀಗ ಕೆಲಸದಿಂದ ತೆಗೆದು ಹಾಕಲಾಗಿದೆ.
ಡಿ ಗ್ರೂಪ್ ಹಾಗೂ ಕಂಪ್ಯೂಟರ್ ಆಪರೇಟರ್ ಗಳನ್ನ ತೆಗೆದು ಹಾಕಲಾಗಿದೆ. 66 ಮಂದಿ ಕೆಲಸ ಮಾಡುವ ಸ್ಥಳದಲ್ಲಿ 150 ಮಂದಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಈ ಮೂಲಕ 94 ಮಂದಿ ನೌಕರರು ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದರು.
ಮುಡಾ ಹಗರಣ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಹಲವರ ಕೆಲಸಕ್ಕೆ ಕುತ್ತು ಬಂದಿದೆ. ಸರ್ಕಾರದ ನೀತಿ- ನಿಮಯ ಗಾಳಿಗೆ ತೂರಿ ಹೆಚ್ಚುವರಿ ನೌಕರರನ್ನ ನೇಮಕ ಮಾಡಿಕೊಂಡು
ಮುಡಾದ ಹಿರಿಯ ಅಧಿಕಾರಿಗಳು ಮುಡಾಗೆ ಆರ್ಥಿಕ ಹೊರೆ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಆರ್ಟಿಐ ಕಾರ್ಯಕರ್ತ ಗಂಗರಾಜು ಈ ಹಿಂದೆ ಈ ಬಗ್ಗೆ ದೂರು ಸಲ್ಲಿಕೆ ಮಾಡಿದ್ದರು. ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.
ಇದೀಗ ದೂರಿನ ಅನ್ವಯ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, 94 ಮಂದಿ ಹೊರ ಗುತ್ತಿಗೆ ನೌಕರರನ್ನ ಕೆಲಸದಿಂದ ತೆಗೆದುಹಾಕಿದೆ ಎಂಬ ಮಾಹಿತಿ ಲಭ್ಯವಾಗಿದೆ.