ಮೈಸೂರು: ಮಗಳು ಲವ್ ಮಾಡಿ ಓಡಿ ಹೋಗಿದ್ದು, ತಮ್ಮ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಮೃತರನ್ನು ತಾಲೂಕಿನ ಬದನೂರು ಗ್ರಾಮದ ನಿವಾಸಿಗಳಾದ ಮಹದೇವಸ್ವಾಮಿ(55), ಮಂಜುಳಾ (45) ಹಾಗೂ ಅವರ ಕಿರಿಯ ಮಗಳು ಎಂದು ಗುರುತಿಸಲಾಗಿದೆ. ಈ ಮೂವರು ಬೈಕ್ ನಲ್ಲಿ ಹೆಬ್ಬಾಳ ಜಲಾಶಕ್ಕೆ ಬಂದಿದ್ದು, ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಾರಿಯಲ್ಲಿ ಹೋಗುತ್ತಿದ್ದ ಗ್ರಾಮಸ್ಥರು ಗಮನಿಸಿ ಪರಿಶೀಲನೆ ನಡೆಸಿದಾಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಎಚ್.ಡಿ.ಕೋಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಾದೇವ ಸ್ವಾಮಿ ದಂಪತಿಯ ಮೊದಲ ಮಗಳು ಪ್ರೀತಿಸಿ ಮದುವೆಯಾಗಲು ಮನೆಬಿಟ್ಟು ಹೋಗಿದ್ದಳು. ಇದರಿಂದ ಮನನೊಂದ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿ, ಡ್ಯಾಂ ಬಳಿ ಬಂದು ನೀರಿಗೆ ಹಾರಿ ಪ್ರಾಣ ಕಳೆದುಕೊಂಡಿದೆ ಎನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ. ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ಡ್ಯಾಂ ಬಳಿ ಜಮಾಯಿಸಿದ್ದರು ಎನ್ನಲಾಗಿದೆ.